ಅತಿಥಿ ಗೃಹ ಸುಸ್ಥಿತಿಗೆ ಜಿಲ್ಲಾಧಿಕಾರಿ ಸೂಚನೆ
ಗುಲ್ಬರ್ಗ: ಜಿಲ್ಲೆಯ 9 ವಿಧಾನಸಭಾ ಮತಕ್ಷೇತ್ರಗಳಿಗೆ ಮೇ.5ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗಾಗಿ ಆಗಮಿಸಲಿರುವ ಚುನಾವಣಾ ವೀಕ್ಷಕರ ವಾಸ್ತವ್ಯಕ್ಕೆ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹಗಳನ್ನು ಕಾಯ್ದಿರಿಸಿ ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ ಹೇಳಿದರು.
ಅವರು ನಗರದಲ್ಲಿ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅತಿಥಿ ಗೃಹದಲ್ಲಿ ಅಗತ್ಯವಾಗಿ ಸಮರ್ಪಕ ಕುಡಿಯುವ ನೀರು, ವಿದ್ಯುತ್, ಶೌಚಾಲಯ, ಬೆಡ್ ಮತ್ತು ಪೀಠೋಪಕರಣಗಳ ವ್ಯವಸ್ಥೆ ಮಾಡಬೇಕು. ಆವರಣ ಸ್ವಚ್ಛವಾಗಿಡಬೇಕು, ಉತ್ತಮವಾಗಿ ಅಡುಗೆ ಮಾಡುವವರನ್ನು ನಿಯೋಜಿಸಬೇಕು. ಅಗತ್ಯ ಬಿದ್ದರೆ ಕಟ್ಟಡ ದುರಸ್ತಿ ಕಾರ್ಯಗಳನ್ನು ಸಹ ಮಾಡುವಂತೆ ಸೂಚಿಸಿದರು.