ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಎಲ್ಲ ತೆರೆಮರೆಯಲ್ಲೇ...

Lingaraj Badiger
Updated On : 5 Apr 2013, 11:07 am

ಕನ್ನಡಪ್ರಭ ವಾರ್ತೆ, ಚಿಂಚೋಳಿ, ಏ.4
ಚಿಂಚೋಳಿ ಮೀಸಲು ವಿಧಾನಸಭಾ ಮತಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಗಳಾಗಿದ್ದ ಮಾಜಿ ಸಚಿವ ಬಾಬುರಾವ ಚವ್ಹಾಣ ಕೆಜೆಪಿ ಸೇರ್ಪಡೆಯಾಗುತ್ತಿದ್ದಂತೆಯೇ ಇತ್ತ ಕಾಂಗ್ರೆಸ್ ಪಕ್ಷದ ಪ್ರಮುಖ ಕಾರ್ಯಕರ್ತರನ್ನು ಮಾಜಿ ಸಚಿವ ಸುನೀಲ್ ವಲ್ಯಾಪುರೆ ಕೆಜೆಪಿಯತ್ತ ಸೆಳೆಯುವ ತಂತ್ರಗಾರಿಕೆ ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ.
ಮತಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಗಳಾಗಿದ್ದ ಸ್ಥಳೀಯ ಕಾಂಗ್ರೆಸ್ ಮುಖಂಡ, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಶಾಮರಾವ ರಾಠೋಡ, ಮಾಜಿ ಸಚಿವ ಬಾಬುರಾವ ಚವ್ಹಾಣ, ಭೀಮರಾವ ತೇಗಲತಿಪ್ಪಿ ಅವರಿಗೆ ಟಿಕೆಟ್ ನೀಡದೆ ಇತ್ತೀಚಿಗಷ್ಟೇ ವೈದ್ಯ ವೃತ್ತಿಗೆ ರಾಜಿನಾಮೆ ನೀಡಿ ಕೆಲವೇ ತಿಂಗಳ ಹಿಂದೆ ಕಾಂಗ್ರೆಸ್ ಸೇರ್ಪಡೆಗೊಂಡಿರುವ ಡಾ. ಉಮೇಶ ಜಾಧವ ಬೆಡಸೂರ ತಾಂಡಾ ಅವರಿಗೆ ಟಿಕೆಟ್ ನೀಡಲಾಗುತ್ತಿದೆ ಎಂಬ ವಿಷಯ ತಿಳಿದ ತಕ್ಷಣ ಮಾಜಿ ಸಚಿವ ಬಾಬುರಾವ ಚವ್ಹಾಣ ಕೆಜೆಪಿಗೆ ಸೇರ್ಪಡೆಗೊಂಡು ಗುಲ್ಬರ್ಗ ಗ್ರಾಮೀಣ ಮತಕ್ಷೇತ್ರಕ್ಕೆ ಕೆಜೆಪಿ ಅಭ್ಯರ್ಥಿಯಾಗಿದ್ದಾರೆ.
ಚಿಂಚೋಳಿ ಮತಕ್ಷೇತ್ರದ ಕೆಜೆಪಿ ಅಭ್ಯರ್ಥಿ ಸುನೀಲ್ ವಲ್ಯಾಪುರೆ ಅತೃಪ್ತಗೊಂಡಿರುವ ಕಾಂಗ್ರೆಸ್ ಮುಖಂಡರಿಗೆ ಹಾಗೂ ಕಾರ್ಯಕರ್ತರನ್ನು ಕೆಜೆಪಿಗೆ ಬೆಂಬಲ ನೀಡುವಂತೆ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ. ಆದರೆ ಕೆಲವು ನಿಷ್ಠಾವಂತ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಯಾವ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲವೆಂದು ತಿರುಗೇಟು ನೀಡಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.
ಕೆಜೆಪಿ ಅಭ್ಯರ್ಥಿ ಸುನೀಲ್ ವಲ್ಯಾಪುರೆ 2ನೇ ಸಲ ಗೆಲವಿಗಾಗಿ ಭಾರಿ ಕಸರತ್ತು ನಡೆಸಿ ಕೆಲವು ಬಿಜೆಪಿ ಮತ್ತು ಜೆಡಿಎಸ್ ಹಾಗೂ ಅತೃಪ್ತ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರುಗಳಿಗೆ ಅಮಿಷ ನೀಡಿ ತನ್ನತ್ತ ಸೆಳೆದುಕೊಳ್ಳುವ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ.
ಸೋಮವಾರ ಭಿಕ್ಕುನಾಯಕ, ಹಸರಗುಂಡಗಿ ತಾಂಡಾಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಶಾಮರಾವ ರಾಠೋಡ, ಈಶ್ವರ ನಾಯಕ ಮತ್ತು ಬಂಜಾರ ಸಮುದಾಯ ಮುಖಂಡರಿಗೆ ಭೇಟಿ ಮಾಡಿ ತಮಗೆ ಬೆಂಬಲಿಸುವಂತೆ ಮತ್ತು ಕೆಜೆಪಿಗೆ ಸೇರ್ಪಡೆಯಾಗುವಂತೆ ಒತ್ತಾಯಿಸಿದ್ದಾರೆ.
ಆದರೆ ಬಿಜೆಪಿ ಸರ್ಕಾರದಲ್ಲಿ ಶಾಸಕ ಮತ್ತು ಸಚಿವರಾಗಿ ಅಧಿಕಾರ ಪಡೆದುಕೊಂಡರೂ ಲಂಬಾಣಿ ತಾಂಡಾಗಳಿಗೆ ಸೌಲಭ್ಯಗಳನ್ನೇ ನೀಡದೆ ಸುಳ್ಳು ಭರವಸೆ ನೀಡಿದ ಸುನೀಲ್ ವಲ್ಯಾಪುರೆ ಅವರಿಗೆ ಬಂಜಾರ ಸಮಾಜ ಈಗ ನಡೆಯುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕೆಂದು ಲಂಬಾಣಿ ತಾಂಡಾಗಳಲ್ಲಿ ಮಾತುಗಳು ಕೇಳಿ ಬರುತ್ತಿವೆ.
ಕಾಂಗ್ರೆಸ್ ಅಭ್ಯರ್ಥಿ ನಿರೀಕ್ಷೆಯಲ್ಲಿರುವ ಡಾ. ಉಮೇಶ ಜಾಧವ ಅತೃಪ್ತಿಗೊಂಡಿರುವ ಕಾಂಗ್ರೆಸ್ ಮುಖಂಡರಿಗೆ ಭೇಟಿಯಾಗಿ ಕಾಂಗ್ರೆಸ್‌ಗೆ ಬೆಂಬಲಿಸುವಂತೆ ಮನವೊಲಿಸುತ್ತಿದ್ದಾರೆ.
ಬಿಜೆಪಿ ಟಿಕೆಟ್ ಆಕಾಂಕ್ಷಿ ರಮೇಶ ಯಾಕಾಪುರ ಎಲ್ಲ ಬಿಜೆಪಿ ಕಾರ್ಯಕರ್ತರನ್ನು ಭೇಟಿ ನೀಡಿ ತಮಗೆ ಬೆಂಬಲ ನೀಡುವಂತೆ ತೆರೆಮರೆಯಲ್ಲಿ ಭಾರಿ ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ತಾಲೂಕಿನಲ್ಲಿ ಕೆಜೆಪಿ, ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ತಮ್ಮ ಚುನಾವಣಾ ಪ್ರಚಾರ ನಡೆಸಿ ಕಾರ್ಯಕರ್ತರಿಗೆ ಅಮಿಷಮೊಡ್ಡುತ್ತಿದ್ದಾರೆಂದು ಹೇಳಲಾಗುತ್ತಿದೆ.
ತಾಲೂಕಿನಲ್ಲಿ ದಿನೇ ದಿನೇ ಬಿಸಿಲಿನ ತಾಪ ಹೆಚ್ಚುತ್ತಿದ್ದಂತೆಯೇ ಇತ್ತ ವಿವಿಧ ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರದ ಬಿಸಿ ಏರುತ್ತಿದೆ. ಆದರೆ, ಇನ್ನು ಯಾವ ಪಕ್ಷದ ಪರವಾಗಿ ಮತದಾರರ ಒಲವು ಕಂಡು ಬರುತ್ತಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement