'ಬಿಜೆಪಿ ಗೆಲ್ಲಿಸಲು ಪಕ್ಷಾಂತರ'
ಗುಲ್ಬರ್ಗ: ಗುಲ್ಬರ್ಗ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬಹುಮತದಿಂದ ಗೆಲ್ಲಿಸಲು ಕೆಜೆಪಿ, ಜೆಡಿಎಸ್, ಕಾಂಗ್ರೆಸ್ ಮತ್ತು ಬಿಎಸ್ಸಾರ್ ಪಕ್ಷಗಳಿಂದ ಹಲವಾರು ದಲಿತ ಮುಖಂಡರು ಹಾಗೂ ಯುವಕರು ಸೇರ್ಪಡೆಯಾಗುತ್ತಿದ್ದಾರೆ ಎಂದು ಪಕ್ಷದ ರಾಜ್ಯ ಸಹ ವಕ್ತಾರ ಶಶೀಲ್ ನಮೋಶಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರದ 5 ವರ್ಷದ ಸಾಧನೆಯನ್ನು ಗಮನಿಸಿ ಹಲವಾರು ಪಕ್ಷಗಳ ಮುಖಂಡರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಇದೀಗ ಪಕ್ಷದ ಅಲೆ ಹೆಚ್ಚಾಗಿದ್ದು, ಬರುವ ದಿನಗಳಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.
ದಕ್ಷಿಣ ವಿಧಾನಸಭೆ ಸೇರಿದಂತೆ ರಾಜ್ಯದ ಅಭ್ಯರ್ಥಿಗಳ ಪಟ್ಟಿ ಶೀಘ್ರದಲ್ಲೇ ಅಂತಿಮಗೊಂಡು ಪಟ್ಟಿ ಬಿಡುಗಡೆಯಾಗಲಿದೆ ಎಂದರು.
ಪಕ್ಷಾಂತರ: ಬಿಎಸ್ಸಾರ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ, ಉಪಾಧ್ಯಕ್ಷ ಮಂಜುನಾಥ ದೊಡ್ಮನಿ, ನಗರ ಅಧ್ಯಕ್ಷ ರವಿಚಂದ್ರ ಹೊಸ್ಮನಿ, ಉಪಾಧ್ಯಕ್ಷ ಉದಯ ಖಣಗೆ, ನಗರ ಪ್ರಧಾನ ಕಾರ್ಯದರ್ಶಿ ರಾಹುಲ್ ತೊಂಟೆ, ಜೆಡಿಎಸ್ ಎಸ್ಸಿ ಮೋರ್ಚಾ ಅಧ್ಯಕ್ಷ ರವೀಂದ್ರ ಲಸ್ಕರಿ, ಜೆಡಿಎಸ್ ಎಸ್ಸಿ, ಎಸ್ಟಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕಾಂಬಳೆ, ಯುವ ಮಾರುತಿ, ವಿಕ್ರಂ, ಪಪ್ಪು ಸಿರೂರ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದರು. ಬಿಜೆಪಿ ಯುವ ಮುಖಂಡರಾದ ಅವರಿಂದ ಕಮಲಾಪುರಕರ್, ವಿನೋದಕುಮಾರ ಟೈಗರ್, ಸುಧೀರ್ ಜವಳ್ಕಿರ್, ಶಿವಕುಮಾರ, ಸುನೀಲ್ ಹಾಗೂ ಕೆಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳಿಂದ ಒಟ್ಟು 42 ಜನ ದಲಿತ ಯುವಕರು ಸೇರ್ಪಡೆಯಾಗಿದ್ದಾರೆ ಎಂದು ವಿವರಿಸಿದರು.