ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬೆಳೆ ಬೆಳೆದಿದ್ದೇ ಬಂತು ಫಲವಿಲ್ಲ!

Rashmi Kasaragodu
Updated On : 5 Apr 2013, 12:59 pm

ಕ.ಪ್ರ. ವಾರ್ತೆ, ಯಾದಗಿರಿ, ಏ.4-
ಶಹಾಪುರ ತಾಲೂಕಿನ ವಡಗೇರಾ ರೈತ ಸಂಪರ್ಕ ಕೇಂದ್ರದಿಂದ ಖರೀದಿಸಿದ್ದು ಎನ್ನಲಾಗಿರುವ ಶೇಂಗಾ ಬೀಜವನ್ನು ಬಿತ್ತಿ ಇಳುವರಿಯಿಲ್ಲದೇ ರೈತರು ಕಂಗಾಲಾಗಿದ್ದಾರೆ. ಕಳಪೆ ಮಟ್ಟದ ಬೀಜ ಪೂರೈಕೆಯೇ ಇದಕ್ಕೆ ಕಾರಣ ಎಂದು ರೈತ ಚನ್ನಬಸ್ಸಪ್ಪ ದೂರಿದ್ದಾರೆ.
ರಾಯಚೂರಿನ ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟದಿಂದ ವಡಗೇರಾ ರೈತ ಸಂಪರ್ಕ ಕೇಂದ್ರಕ್ಕೆ ಟಿಎಂವಿ-2 ಎಂಬ ಹೆಸರಿನ ಶೇಂಗಾ ಬೀಜಗಳನ್ನು ಸರಬರಾಜು ಮಾಡಲಾಗಿತ್ತು. ರೈತ ಚನ್ನಬಸ್ಸಪ್ಪ ಲಕ್ಷಾಂತರ ರುಪಾಯಿ ಸಾಲ ಮಾಡಿ ಹೊಲದಲ್ಲಿ ಬೋರವೆಲ್ ಹಾಕಿಸಿ ಶೇಂಗಾ ಬೀಜವನ್ನು ಅಲ್ಲಿಯ ರೈತ ಸಂಪರ್ಕ ಕೇಂದ್ರದಿಂದ ಪ್ರತಿ ಕ್ವಿಂಟಲ್‌ಗೆ 8 ಸಾವಿರ ನೀಡಿ ಖರೀದಿಸಿದರು.
ಮೂರೂವರೆ ತಿಂಗಳಾದ್ರೂ ಕಾಯಿ ಕಟ್ಟಿಲ್ಲ: ತಮ್ಮ 5 ಎಕರೆ ಜಮೀನಿನಲ್ಲಿ ಬೇಸಿಗೆ ಹಂಗಾಮಿ ಶೇಂಗಾ ಬಿತ್ತನೆಯನ್ನು ಕಳೆದ ಜನವರಿ ತಿಂಗಳಲ್ಲಿ ಬಿತ್ತನೆ ಮಾಡಿದ್ದರು. ಬಿತ್ತನೆ ಮಾಡಿ ಸುಮಾರು ಮೂರು ತಿಂಗಳು ಕಳೆದರೂ ಇದುವರೆಗೂ ಶೇಂಗಾ ಬಳ್ಳಿಯಲ್ಲಿ ಶೇಂಗಾ ಕಾಯಿ ಕಟ್ಟಿಲ್ಲ. ಇದರಿಂದ ಕಂಗಾಲಾಗಿರುವ ರೈತ ಚನ್ನಬಸಪ್ಪ ದಿಕ್ಕು ತೋಚದಂತೆ ಕುಳಿತಿದ್ದಾರೆ.
'ಕಳೆದ ವರ್ಷ ಯಾದಗಿರಿಯ ಮಾರುಕಟ್ಟೆಯಲ್ಲಿ ಶೇಂಗಾ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಿದ್ದೆ. ಚೆನ್ನಾಗಿ ಇಳುವರಿ ಬಂದಿತ್ತು. ಆದರೆ ಇಲ್ಲಿಯ ರೈತ ಸಂಪರ್ಕ ಕೇಂದ್ರದಿಂದ ಖರೀದಿಸಿದ ಬೀಜಗಳನ್ನು ಬಿತ್ತನೆ ಮಾಡಿದ್ದರಿಂದ ಶೇಂಗಾ ಬಳ್ಳಿಯು ಹಚ್ಚ ಹಸಿರಿನಿಂದ ಕೂಡಿ ಹುಲುಸಾಗಿ ಬೆಳೆದಿದೆ. ಬಳ್ಳಿಯನ್ನು ನೋಡಿದರೆ ಇಳುವರಿ ಇದ್ದಂತೆ ಕಂಡುಬರುತ್ತದೆ. ಆದರೆ ಕಿತ್ತು ನೋಡಿದರೆ ಅದಕ್ಕೆ ಶೇಂಗಾ ಕಾಯಿಗಳೇ ಇಲ್ಲ.
ಕೆಲವೊಂದು ಶೇಂಗಾ ಗಿಡಕ್ಕೆ ಸಣ್ಣ ಕಾಯಿ ಕಟ್ಟಿವೆ. ಆದರೆ ಅವುಗಳಲ್ಲಿ ಕಾಳು ಇಲ್ಲ. ಇನ್ನೂ ಹಾಲಿನಂತಹ ಬೆಳ್ಳನೆಯ ದ್ರವರೂಪದಲ್ಲೇ ಇದೆ. ಈ ವೇಳೆಗಾಗಲೇ ಶೇಂಗಾದ ರಾಶಿ ಮಾಡಬೇಕಾಗಿತ್ತು. ಕಳಪೆ ಬೀಜ ನೀಡಿರುವುದೇ ಇದಕ್ಕೆ ಕಾರಣ. ಈಗ ಮಾಡಿಕೊಂಡಿರುವ ಸಾಲ ತೀರಿಸುವುದು ಹೇಗೆ ಎನ್ನುವುದು ಗೊತ್ತಾಗದೇ ದಿಕ್ಕು ತೋಚದಂತಾಗಿದೆ. ಈ ಕುರಿತು ಈಗಾಗಲೇ ಶಹಾಪುರದಲ್ಲಿರುವ ಸಹಾಯಕ ಕೃಷಿ ನಿರ್ದೇಶಕರಿಗೆ ದೂರು ಸಲ್ಲಿಸಿದ್ದೇನೆ' ಎನ್ನುತ್ತಾರೆ ಚನ್ನಬಸಪ್ಪ.
ಕಾರಣ ನಿಗೂಢ?: ಈ ಬಗ್ಗೆ ಇಲ್ಲಿಯ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಕೇಳಿದರೆ, ಈ ಹೋಬಳಿಯಲ್ಲಿ ಸುಮಾರು 106 ಕ್ವಿಂಟಲ್ ಶೇಂಗಾ ಬೀಜಗಳನ್ನು ಮಾರಾಟ ಮಾಡಿದ್ದೇವೆ. ಯಾರಿಂದಲೂ ದೂರುಗಳು ಬಂದಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಶೇಂಗಾ ಬಳ್ಳಿಗೆ ಇಳುವರಿ ಯಾಕೆ ಆಗಿಲ್ಲ ಎಂಬುದನ್ನು ತಿಳಿಯಲು ಕೃಷಿ ವಿಜ್ಞಾನಿಗಳನ್ನು ಕರೆಸುತ್ತಿದ್ದೇವೆ. ಅವರು ಬಂದ ನಂತರ ಜಮೀನು ನೋಡಿದಾಗ ಬಳ್ಳಿಗೆ ಕಾಯಿ ಕಟ್ಟದೆ ಇರುವ ಕಾರಣ ತಿಳಿಯುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement