ಸರಣಿ ಕೊಲೆಗೆ ಮತ್ತಿಬ್ಬರು ಸೇರ್ಪಡೆ
ಕನ್ನಡಪ್ರಭ ವಾರ್ತೆ ಆಳಂದ ಏ.4-
ತಾಲೂಕಿನ ಕಡಗಂಚಿಯಲ್ಲಿ ಎರಡು ಗುಂಪುಗಳ ಮಧ್ಯದ ಹಳೆಯ ವೈಷಮ್ಯ ಮರುಕಳಿಸಿದ ಹಿನ್ನೆಲೆಯಲ್ಲಿ ಬುಧವಾರ ಇಬ್ಬರು ಹತರಾಗಿದ್ದಾರೆ.
ಮಾರಕಾಸ್ತ್ರಗಳಿಂದ ಕುತ್ತಿಗೆ ಕೊಯ್ದು ತಾಲೂಕಿನ ಕಡಗಂಚಿಯ ಇಬ್ಬರನ್ನು ಕೊಲೆ ಮಾಡಿದ ಘಟನೆ ಗಡಿಭಾಗದ ಖಜೂರಿ ಗಡಿಯಾಚೆ ಸುಮಾರು 1 ಕಿಮೀ ಅಂತರದ ಮಹಾರಾಷ್ಟ್ರ ವ್ಯಾಪ್ತಿಯ ಉಮರಗಾ ಹೆದ್ದಾರಿಯಲ್ಲಿ ನಡೆದಿದೆ.
ತಾಲೂಕಿನ ಕಡಗಂಚಿಯ ಅಂಬಾರಾಯ ಪೂಜಾರಿ(30) ಮತ್ತು ಶ್ರೀಶೈಲ್ ಪೂಜಾರಿ ಅಲಿಯಾಸ್ ಅಲ್ದಿ(29) ಕೊಲೆಯಾದವರು. ಬೊಲೆರೋ ವಾಹನದಲ್ಲಿ ಬಂದಿದ್ದ ಹಂತಕರು ಈ ಇಬ್ಬರನ್ನು ಬುಧವಾರ ರಾತ್ರಿ ಖಜೂರಿಯಿಂದ ಅಪಹರಿಸಿಕೊಂಡು ಉರಮಗಾ ಸರಹದ್ದಿನಲ್ಲಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
11 ಮಂದಿ ಮೇಲೆ ಪ್ರಕರಣ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಶ್ರೀಶೈಲ್ ಅಲ್ದಿಯ ಸೋಹದರ ಗಣೇಶನು ಅರವಿಂದ ನರೋಣಿ ಗುಂಪಿನ 11 ಮಂದಿಯ ಮೇಲೆ ಉಮರಗಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶಾಂತಿನಾಥ ನರೋಣಿ, ಮಚ್ಛೇಂದ್ರನಾಥ ನರೋಣಿ, ಗೋರಕನಾಥ, ನರೋಣಿ, ಶರಣಪ್ಪ ನರೋಣಿ, ವಿಠ್ಠಲ್ ನರೋಣಿ, ಕರಬಸಪ್ಪ, ಸಿದ್ದಪ್ಪ, ಈರಣ್ಣ, ಚಂದ್ರಕಾಂತ ಭೂಸನೂರ, ಗಂಗಾಧರ್ ಭೂಸನೂರ, ವಿಠ್ಠಲ್ ಆಲೂರ ಮೇಲೆ ಪ್ರಕರಣ ದಾಖಲಾಗಿದೆ.
ಘಟನೆ: ಬಂಗರಗಾ ಗ್ರಾಮದಲ್ಲಿನ ಸಂಬಂಧಿಗಳ ಮನೆಯಿಂದ ಖಜೂರಿ ಢಾಬಾಕ್ಕೆ ಬುಧವಾರ ರಾತ್ರಿ ಊಟಕ್ಕೆ ಹೋಗಿದ್ದ ಮೂವರು ಪೈಕಿ ಮೃತ ಶ್ರೀಶೈಲ್ ಮತ್ತು ಅಂಬಾರಾಯ ಜೊತೆಗಿದ್ದ ಶ್ರೀಶೈಲನ ಸಹೋದರ ಗಣೇಶನು ಢಾಬಾದಲ್ಲಿ ಕುಳಿತು ಊಟದ ಆರ್ಡರ್ ಕೊಡಲು ಎದ್ದು ಬರುತ್ತಿದ್ದಂತೆ ಹಂತಕರು ಮಾರಕಾಸ್ತ್ರಗಳಿಂದ ದಾಳಿ ಮಾಡಿದಾಗ ಗಣೇಶನು ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಆಗ ಹಂತಕರು ಶ್ರೀಶೈಲ್ ಮತ್ತು ಅಂಬಾರಾಯನನ್ನು ಅಪಹರಿಸಿಕೊಂಡು ಕೊಲೆ ನಡೆಸಿದ್ದಾರೆ ಎಂದು ಉಮರಗಾ ಪೊಲೀಸರು ತಿಳಿಸಿದ್ದಾರೆ.
ಪರಿಶೀಲನೆ: ಉಮರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಬಾಳಕೃಷ್ಣ, ಉಮರಗಾ ಪ್ರೊಬೇಶನರಿ ಎಸ್ಪಿ ಎಂ.ರಾಜಕುಮಾರ, ಡಿವೈಎಸ್ಪಿ ಆರ್.ಎಂ. ಜಾಧವ, ಸಿಪಿಐ, ಪಿಎಸ್ಐ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಮೃತರು ಪ್ರಕರಣದಲ್ಲಿ ಭಾಗಿ: ಕೊಲೆಗೀಡಾದವರ ಪೈಕಿ ಅಂಬಾರಾಯ ಪೂಜಾರಿ ಬಾಗಲಕೋಟೆಯಲ್ಲಿ ಕೊಲೆ ಮತ್ತು ಮೋಟಾರ್ ಸೈಕಲ್ ದರೋಡೆ ಪ್ರಕರಣದಲ್ಲಿ ಭಾಗಿಯಾಗಿ ಬಾಗಲಕೋಟೆ ಜೈಲಿನಿಲ್ಲಿದ್ದು ಜಾನೀನಿನ ಮೇಲೆ ಹೊರಗೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಅಂಬಾರಾಯ ಮತ್ತು ಶ್ರೀಶೈಲ್ ಅವರು ಬೀದರ್- ಗುಲ್ಬರ್ಗ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ದಿ. ಅರವಿಂದ ನರೋಣಿ ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಗಳಾಗಿದ್ದರು. ಇಬ್ಬರ ವಿರುದ್ಧ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬೆಚ್ಚಿ ಬಿದ್ದ ಜನತೆ: ಹಳೆಯ ವೈಷಮ್ಯದಿಂದ ಖಜೂರಿ ಸರಹದ್ದಿನಲ್ಲೂ ಸರಣಿ ಕೊಲೆಗಳಾಗುತ್ತಲೇ ಇವೆ. ಇಂತಹ ಪರಿಸ್ಥಿತಿಯಲ್ಲಿ ಕಡಗಂಚಿ ಸರಣಿ ಕೊಲೆ ಖಜೂರಿ ಸೀಮೆಯಲ್ಲಿಯೇ ನಡೆದಿರುವುದು ಗಡಿಭಾಗದ ಜನರನ್ನು ಬೆಚ್ಚಿಬೀಳುಸುವಂತೆ ಮಾಡಿದೆ.