ಗುರುಮಠಕಲ್ ಕೈ ಕೋಟೆಯಲ್ಲಿ ಅಪಸ್ವರದ ಸದ್ದು
ಕನ್ನಡಪ್ರಭ ವಾರ್ತೆ, ಯಾದಗಿರಿ, ಏ.5
ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಾಳಯದಲ್ಲಿ ಈಗ ಎಲ್ಲವೂ ಗೊಂದಲ. ಹಾಲಿ ಶಾಸಕ ಬಾಬುರಾವ ಚಿಂಚನಸೂರಗೆ ಸ್ವಪಕ್ಷೀಯರೇ ಮಗ್ಗಲು ಮುಳ್ಳಾಗಿದ್ದು, ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಒತ್ತಡ ಹೇರುವ ಎಲ್ಲ ರೀತಿಯ ತಂತ್ರವನ್ನು ಉಪಯೋಗಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಕ್ಷೇತ್ರದಿಂದ ಈ ಬಾರಿ ಚಿಂಚನಸೂರ ಬದಲಿಗೆ ಬೇರೊಬ್ಬರಿಗೆ ಟಿಕೆಟ್ ನೀಡಲಾಗುತ್ತಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಮಹಿಳಾ ಅಭ್ಯರ್ಥಿಯೊಬ್ಬರಿಗೆ ಟಿಕೆಟ್ ಒಲಿಯುವ ಲಕ್ಷಣವೂ ಕಂಡುಬರುತ್ತಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಅವರ ಆಶಯದಂತೆ ಜಿಲ್ಲೆಯಲ್ಲಿ ಒಬ್ಬರಿಗೆ ಪಕ್ಷದ ಟಿಕೆಟ್ ನೀಡಿದಂತೆಯೂ ಆಗುತ್ತದೆ ಹಾಗೂ ಚಿಂಚನಸೂರ ವಿರೋಧಿಗಳ ಧ್ವನಿಯನ್ನೂ ಅಡಗಿಸಿದಂತಾಗುತ್ತದೆ ಎಂಬ ಕಾರಣಕ್ಕೆ ಈ ರೀತಿಯ ತಂತ್ರವನ್ನು ಮುಖಂಡರು ಕೈಗೊಳ್ಳುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.
ಯಾರು ಆ ಮಹಿಳೆ?: ಕಾಂಗ್ರೆಸ್ ಹಿರಿಯ ನಾಯಕರಾಗಿದ್ದ ದಿ. ಕುಯಿಲೂರ್ ಮಲ್ಲಪ್ಪ ಕುಟುಂಬ ವರ್ಗದ ಸದಸ್ಯರೊಬ್ಬರು ತೆರೆಮರೆಯಲ್ಲಿ ಗುರುಮಠಕಲ್ ಮತಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿರುವುದಾಗಿ ತಿಳಿದು ಬಂದಿದೆ. ಮಲ್ಲಪ್ಪ ಅವರ ತಮ್ಮನಾದ ಈಶ್ವರಚಂದ್ರ ಕುಯಿಲೂರ್ ಅವರ ಮಗಳಾದ ನ್ಯಾಯವಾದಿ ನಂದಾ ಅವರು ಕಳೆದ 3 ತಿಂಗಳಿಂದ ಕಾಂಗ್ರೆಸ್ ಟಿಕೆಟ್ಗಾಗಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಹಲವಾರು ಬಾರಿ ಭೇಟಿಯಾಗಿದ್ದಾರೆ ಎಂಬ ಮಾಹಿತಿಯಿದೆ.
ನಂದಾ ಅವರು ಯಾದಗಿರಿಯಲ್ಲಿಯೇ ವಕೀಲಿ ವೃತ್ತಿ ನಡೆಸುತ್ತಿದ್ದಾರೆ. ಅವರ ಪತಿ ನಾರಾಯಣಪೇಟ್ನಲ್ಲಿ ವೈದ್ಯರಾಗಿದ್ದಾರೆ. ಮಲ್ಲಪ್ಪ ಅವರು ಶಾಸಕರಾಗಿ, ರಾಜ್ಯಸಭಾ ಸದಸ್ಯರಾಗಿ ಪಕ್ಷಕ್ಕೆ ಸುದೀರ್ಘ ಸೇವೆ ಸಲ್ಲಿಸಿ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರಿಗೆ ಆತ್ಮೀಯರಾಗಿದ್ದರು. ಅವರ ವರ್ಚಸ್ಸು ಹಾಗೂ ಸಂಬಂಧವನ್ನೇ ಬಂಡವಾಳವನ್ನಾಗಿಸಿಕೊಂಡು ನಂದಾ ಅವರು ಟಿಕೆಟ್ ಪಡೆಯಲು ಕಳೆದ ಹಲವಾರು ದಿನಗಳಿಂದ ದೆಹಲಿಯಲ್ಲಿದ್ದು ಪ್ರಯತ್ನಿಸುತ್ತಿದ್ದಾರೆ.
ಸಮಾನ ಮನಸ್ಕರ ವೇದಿಕೆ ವಿರೋಧ: ಶಾಸಕ ಬಾಬುರಾವ ಚಿಂಚನಸೂರ ಅವರಿಗೆ ಸದ್ಯ ಸ್ವಪಕ್ಷೀಯರೇ ಅಡ್ಡಗಾಲಾಗಿದ್ದಾರೆ. ಕಾಂಗ್ರೆಸ್ನ ಸಮಾನ ಮನಸ್ಕ ಕಾರ್ಯಕರ್ತರ ವೇದಿಕೆ ರಚಿಸಿಕೊಂಡಿರುವ ವಿರೋಧಿಗಳು ತಮ್ಮ ಧ್ವನಿಯನ್ನು ಗಟ್ಟಿಗೊಳಿಸುತ್ತಿದ್ದಾರೆ. ಪ್ರಮುಖರಾದ ಸಾಯಿಬಣ್ಣಾ ಬೋರಬಂಡಾ, ಲಕ್ಷ್ಮಾರೆಡ್ಡಿ ಅನಪುರ ಸೇರಿದಂತೆ ಅನೇಕರ ನೇತೃತ್ವದಲ್ಲಿ ವೇದಿಕೆ ಎರಡು ದಿನಗಳ ಹಿಂದೆ ಸಭೆ ನಡೆಸಿ ಚಿಂಚನಸೂರ ಅವರಿಗೆ ಟಿಕೆಟ್ ನೀಡದಂತೆ ಆಗ್ರಹಿಸಿದೆ.
ಸ್ಥಳೀಯರಲ್ಲಿ ಯಾರಿಗಾದರೂ ಒಬ್ಬರಿಗೆ ಟಿಕೆಟ್ ನೀಡಿದರೆ ಎಲ್ಲರೂ ಒಗ್ಗಟ್ಟಾಗಿ ಗೆಲವಿಗೆ ಶ್ರಮಿಸುವುದಾಗಿ ಹೇಳುತ್ತಿದ್ದಾರೆ. ಅಲ್ಲದೇ ಚಿಂಚನಸೂರ ಅವರಿಗೆ ಟಿಕೆಟ್ ನೀಡಿದರೆ ಎಲ್ಲರೂ ಸಾಮೂಹಿಕ ರಾಜಿನಾಮೆ ಸಲ್ಲಿಸುವ ಬೆದರಿಕೆಯನ್ನೂ ಒಡ್ಡಿದ್ದಾರೆ. ಇದು ಪಕ್ಷದ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ ಎನ್ನಲಾಗಿದೆ.
ಹಾಗಂತ ಚಿಂಚನಸೂರ ಕೂಡ ಸುಮ್ಮನಿಲ್ಲ..
ಹಾಲಿ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಸತತ 8 ಬಾರಿ ಆಯ್ಕೆಯಾಗಿರುವ ಕಾಂಗ್ರೆಸ್ ಭದ್ರಕೋಟೆ ಎಂದೇ ಹೆಸರಾಗಿರುವ ಗುರುಮಠಕಲ್ನಲ್ಲಿ ಈಗ ಅಪಸ್ವರ ಭುಗಿಲೆದ್ದಿದೆ.
ಖರ್ಗೆ ಅವರು ನಿರ್ಧರಿಸುವ ಅಭ್ಯರ್ಥಿಗೇ ಇಲ್ಲಿ ಟಿಕೆಟ್ ಸಿಗುವುದು ನಿಶ್ಚಿತ. ಬಂಡಾಯದ ಬಾವುಟ ಹಾರಿಸುತ್ತಿರುವವರೆಲ್ಲರೂ ಖರ್ಗೆ ನಿಷ್ಠರೇ ಆಗಿರುವುದರಿಂದ ಮುಂದೇನಾಗುತ್ತದೆ ಎಂಬ ಕುತೂಹಲ ತೀವ್ರಗೊಂಡಿದೆ.
ಇಷ್ಟಾಗಿಯೂ ಬಾಬುರಾವ ಚಿಂಚನಸೂರ ಅವರು ಟಿಕೆಟ್ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಲೇ ಇದ್ದಾರೆ. ಹಾಲಿ ಶಾಸಕರಾಗಿರುವುದರಿಂದ ಟಿಕೆಟ್ ತಪ್ಪಿಸಲು ಸಾಧ್ಯವಿಲ್ಲ ಎಂಬ ಮಾತೂ ಕೇಳಿಬರುತ್ತಿದೆ.
ಹೀಗೆ ಕೈ ಭದ್ರಕೋಟೆಯಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಗೊಂದಲ ಹೆಚ್ಚುತ್ತಿದೆ. ದಿನಕ್ಕೊಂದು ಅಭ್ಯರ್ಥಿಯ ಹೆಸರು ಕೇಳಿಬರುತ್ತಿದೆ. ಮತ್ತೆ ಕ್ಷೇತ್ರದಲ್ಲಿ ಕಾಂಗ್ರೆಸ್ ಬಾವುಟ ಹಾರಿಸುವ ಜವಾಬ್ದಾರಿಯೂ ಖರ್ಗೆ ಮೇಲಿದೆ. ಆದ್ದರಿಂದ ಈಗ ಎದ್ದಿರುವ ಗೊಂದಲವನ್ನು ಅವರು ಹೇಗೆ ಪರಿಹರಿಸುತ್ತಾರೆ ಎನ್ನುವುದು ಕಾದು ನೋಡಬೇಕಿದೆ. ಈ ಗೊಂದಲದ ಮಧ್ಯೆ ಯಾರಿಗೆ ಟಿಕೆಟ್ ಸಿಗುತ್ತದೆ ಎನ್ನುವುದು ಸದ್ಯಕ್ಕಿರುವ ಕುತೂಹಲ.
-ನಾರಾಯಣ ಹೆಗಡೆ