ಕಾರ್ಯಕರ್ತರಿಗೆ ಬೈಕ್, ಕಾರ್ ಭಾಗ್ಯ!
ಕೊಪ್ಪಳ: ಪಕ್ಷ ಬಿಟ್ಟು ಹೋದವರನ್ನು ಹಾಗೂ ಬೇರೆ ಪಕ್ಷದಲ್ಲಿರುವ ಕಾರ್ಯಕರ್ತರನ್ನು ಸೆಳೆಯಲು ಎಲ್ಲ ಪಕ್ಷಗಳಿಂದಲೂ ಎಲ್ಲಿಲ್ಲದ ಕಸರತ್ತು ನಡೆಯುತ್ತಿದೆ. ಎಲ್ಲಕ್ಕಿಂತಲೂ ಮಿಗಿಲಾಗಿ ಇಲ್ಲೊಂದು ರಾಜಕೀಯ ಪಕ್ಷ ಬಂಪರ್ ಕೊಡುಗೆ ಘೋಷಣೆ ಮಾಡಿ, ಕಾರ್ಯಕರ್ತರಿಗೆ ಬೈಕ್ ಮತ್ತು ಕಾರ್ ಭಾಗ್ಯ ಕಲ್ಪಿಸಿಕೊಟ್ಟಿದೆ!
ಜೀವನದಲ್ಲಿ ಕಾರ್, ಬೈಕ್ ತೆಗೆದುಕೊಳ್ಳುವ ಆಸೆ ಹೊಂದಿದವರಿಗೆ ಇದೊಂದು ಸುವರ್ಣಾವಕಾಶ. ಹಾಗಂತ ಷರತ್ತುಗಳು ಅನ್ವಯವಾಗುತ್ತವೆ. ಷರತ್ತಿನ ಅನುಸಾರ ನಡೆದುಕೊಂಡರೆ ಬೈಕ್ ಉಚಿತವಾಗಿ ಸಿಗುತ್ತದೆ. ಇಲ್ಲದಿದ್ದರೇ ಬೈಕ್ ಸಾಲ ತೀರಿಸುವ ಹೊಣೆ ಮಾತ್ರ ಕಾರ್ಯಕರ್ತರ ಮೇಲೆಯೇ.
ಏನಿದು ಕೊಡುಗೆ?: ಸಾರ್ವತ್ರಿಕ ಚುನಾವಣೆಯಲ್ಲಿ ಗೆಲವು ಸಾಧಿಸಲು ರಾಜಕೀಯ ಪಕ್ಷವೊಂದು ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಂಡುಕೊಂಡಿರುವ ದಾರಿ ಇದು. ಚುನಾವಣಾ ಪ್ರಚಾರಕ್ಕಾಗಿ ಕಾರ್ ಅಥವಾ ಬೈಕ್ ಕೊಳ್ಳುವುದಕ್ಕೆ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ನೀಡಲಾಗುತ್ತದೆ. ಬೈಕ್ನ ಡೌನ್ ಪೇಮೆಂಟ್ನ್ನು ರಾಜಕೀಯ ಪಕ್ಷವೇ ಪಾವತಿಸುತ್ತದೆ. ಆದರೆ, ವಾಹನ ನೋಂದಣಿ ಮಾತ್ರ ಪಡೆಯುವವನ ಹೆಸರಿನಲ್ಲಾಗುತ್ತದೆ. ಜತೆಗೆ ಅದಕ್ಕೆ ಮಾಡಿದ ಸಾಲವೂ ಬೈಕ್ ಪಡೆದವನ ಹೆಸರಿನಲ್ಲೇ ಇರುತ್ತದೆ.
ಹೀಗೆ, ಸಾಲದ ಮೇಲೆ ಪಡೆದಿರುವ ಬೈಕ್ ತಮ್ಮದಾಗಬೇಕಾದರೆ ಅಥವಾ ಬೈಕ್ನ ಮೇಲಿನ ಸಾಲ ತೀರಬೇಕಾದರೆ ಈ ರಾಜಕೀಯ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಗೆದ್ದರೆ ಬೈಕ್ನ ಎಲ್ಲ ಸಾಲವನ್ನು ಆ ಪಕ್ಷದ ನಾಯಕರೇ ತೀರಿಸುತ್ತಾರೆ. ಒಂದು ವೇಳೆ ಬೈಕ್ ಕೊಡಿಸಿದ ಅಭ್ಯರ್ಥಿ ಸೋತರೆ ಸಾಲವನ್ನು ಬೈಕ್ ಪಡೆದವನೇ ತೀರಿಸಬೇಕು. ಇನ್ನು ಇದೇ ಮಾದರಿಯಲ್ಲಿ ಕೆಲವು ಪ್ರಮುಖ ಕಾರ್ಯಕರ್ತರಿಗೆ ಕಾರನ್ನೂ ನೀಡಲಾಗುತ್ತದೆ.
ಕಾರ್ ಖರೀದಿಸುವವರು ಅದಕ್ಕೆ ಅಗತ್ಯವಾದ ಸಾಲ ವ್ಯವಸ್ಥೆ ಮಾಡಿಕೊಳ್ಳಬೇಕು. ಗೆದ್ದ ಮೇಲೆ ಸಾಲದ ಹಣವನ್ನು ನೀಡಲಾಗುತ್ತದೆ ಎಂದು ಆಮಿಷ ಒಡ್ಡಲಾಗುತ್ತಿದೆ.
ಇದರಿಂದ ಅಭ್ಯರ್ಥಿ ಮತ್ತು ಕಾರ್ಯಕರ್ತರಿಬ್ಬರಿಗೂ ಅನುಕೂಲ. ಎಲ್ಲದಕ್ಕಿಂತ ಮಿಗಿಲಾಗಿ ಹಣ ತೆಗೆದುಕೊಂಡು ಮೋಸ ಮಾಡದಂತೆ ತಡೆಯುವ ಯತ್ನ ಇದರಲ್ಲಡಗಿದೆ. ಈ ಕುರಿತು ಬ್ಯಾಂಕ್ ಅಧಿಕಾರಿಗಳು ಹಾಗೂ ಬೈಕ್ ಕಂಪನಿಯೊಂದಿಗೆ ಚರ್ಚಿಸಲಾಗಿದೆ. ಆದಷ್ಟು ಬೇಗನೇ ಬೈಕ್ ನೀಡುವ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಪ್ರತಿ ಸಾವಿರ ಮತದಾರರಿನಿಗೆ ಒಬ್ಬ ಕಾರ್ಯಕರ್ತರನ್ನು ನಿಯೋಜಿಸುವ ತಯಾರಿ ನಡೆದಿದೆ. ಇದಕ್ಕಾಗಿ ಗ್ರಾಮೀಣ ಪ್ರದೇಶವನ್ನು ಸುತ್ತಾಡಿ, ಕಾರ್ಯಕರ್ತರನ್ನು ಸಿದ್ಧ ಮಾಡುವ ಕಾರ್ಯ ಭರದಿಂದ ಸಾಗಿದೆ.
-ಸೋಮರಡ್ಡಿ ಅಳವಂಡಿ