ಕೆಜೆಪಿ ಅಭ್ಯರ್ಥಿಗೆ 101ನೀಡಿ ಆಶೀರ್ವದಿಸಿದ ಗ್ರಾಮಸ್ಥರು!
ಕ.ಪ್ರ. ವಾರ್ತೆ , ಮುದಗಲ್ , ಏ.6
ಚುನಾವಣೆ ಬಂದರೆ ಜನರಿಗೆ ಹಬ್ಬ ಬಂದಂತೆ. ಸಿಕ್ಕಷ್ಟು ಬಾಚಿಕೊಳ್ಳಬೇಕು ಎನ್ನುವ ಈ ದಿನಮಾನದಲ್ಲಿ ಲಿಂಗಸ್ಗೂರು ಮೀಸಲು ಕ್ಷೇತ್ರದ ಕೆಜೆಪಿ ನಿಯೋಜಿತ ಅಭ್ಯರ್ಥಿ ಎಚ್.ಬಿ. ಮುರಾರಿಗೆ ಗ್ರಾಮಸ್ಥರೇ 101 ನೀಡಿ ಚುನಾವಣೆಯಲ್ಲಿ ಗೆದ್ದು ಬರುವಂತೆ ಆಶೀರ್ವದಿಸಿದ ಪ್ರಸಂಗ ಪಟ್ಟಣ ಸಮೀಪದ ಬನ್ನಿಗೋಳ ಗ್ರಾಮದಲ್ಲಿ ಜರುಗಿತು.
ಚುನಾವಣೆ ಪ್ರಚಾರಕ್ಕೆಂದು ಗ್ರಾಮಗಳಿಗೆ ಧಾವಿಸುವ ವಿವಿಧ ಪಕ್ಷಗಳ ಅಭ್ಯರ್ಥಿಗಳಿಗೆ ತಾವು ಗ್ರಾಮಕ್ಕೆ ಏನು ಕೊಡುತ್ತೀರಿ, ದೇವಸ್ಥಾನಕ್ಕೆ, ಗುಡಿ- ಗುಂಡಾರಗಳಿಗೆ, ಮಸೀದಿ- ಮಂದಿರಗಳಿಗೆ ಎಷ್ಟು ಹಣ ನೀಡುತ್ತಿರಿ ಎಂದು ಪ್ರಶ್ನಿಸುವುದು ಸಾಮಾನ್ಯ. ಆದರೆ ಅಖಾಡಕ್ಕಿಳಿದ ಕೆಜೆಪಿ ಅಭ್ಯರ್ಥಿ ಎಚ್.ಬಿ. ಮುರಾರಿ ಬನ್ನಿಗೋಳ ಗ್ರಾಮಕ್ಕೆ ಮತಯಾಚಿಸಲು ಬಂದಾಗ ಗ್ರಾಮದ ನೂರಾರು ಮತದಾರರು ನೀವು ಗ್ರಾಮಕ್ಕೆ ಹಣ- ಹೆಂಡ ಕೊಡುವುದು ಬೇಡ. ಚುನಾವಣೆಯಲ್ಲಿ ಗೆದ್ದ ನಂತರ ಗ್ರಾಮಕ್ಕೆ ಮೂಲ ಸೌಲಭ್ಯ ಕಲ್ಪಿಸಿದರೆ ಸಾಕು. ತಾವು ತಾಪಂ ಅಧ್ಯಕ್ಷರಿದ್ದಾಗ ನಿಮ್ಮ ಆಡಳಿತ ಉತ್ತಮವಾಗಿತ್ತು ಎಂದು ಪ್ರಶಂಸಿಸಿದ ಬನ್ನಿಗೋಳ ಗ್ರಾಮದ ಮತದಾರರು, 101 ನೀಡಿ ಗಮನ ಸೆಳೆದರು.