'ಬಿಜೆಪಿ ಅಭ್ಯರ್ಥಿಗಳ ಕೊನೆ ಪಟ್ಟಿ 9ರಂದು ಬಿಡುಗಡೆ'
ಕ.ಪ್ರ. ವಾರ್ತೆ , ಬೆಂಗಳೂರು, ಏ.6
ವಿಧಾನಸಭೆ ಚುನಾವಣೆ ಬಿಜೆಪಿಯ ಎರಡನೆ ಮತ್ತು ಕೊನೆಯ ಪಟ್ಟಿ ಏ.9ರಂದು ಬಿಡುಗಡೆಯಾಗಲಿದ್ದು, ಕಳಂಕಿತರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಬಿಜೆಪಿ ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಕಳಂಕಿತರಿಗೆ ಟಿಕೆಟ್ ನೀಡುವ ಬಗ್ಗೆ ಈಗಲೇ ಏನೂ ಹೇಳುವುದಿಲ್ಲ. ಕಳಂಕಿತರಿಗೆ ಟಿಕೆಟ್ ನೀಡುವ ವಿಚಾರ ಪಕ್ಷದ ವರಿಷ್ಠರ ಮುಂದಿದೆ. ಇದುವರೆಗೆ ಈ ವಿಚಾರದಲ್ಲಿ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಯಾರಿಗೆ ಟಿಕೆಟ್ ದೊರೆಯಲಿದೆ ಎಂಬುದನ್ನು ಕಾದುನೋಡಿ ಎಂದು ಅವರು ತಿಳಿಸಿದರು. ಬಿಜೆಪಿ ಕಚೇರಿಯಲ್ಲಿ ಶನಿವಾರ ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು, ಈಗಾಗಲೇ 140 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಯಾವುದೇ ಗೊಂದಲವಿಲ್ಲದಂತೆ ನೋಡಿಕೊಳ್ಳಲಾಗಿದೆ. ಎರಡನೇ ಹಂತದಲ್ಲಿ ಪೂರ, ಪ್ರಮಾಣದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ಈ ಕುರಿತು ಚರ್ಚಿಸಲು ಭಾನುವಾರ ಸಂಜೆ ರಾಜ್ಯ ಚುನಾವಣಾ ಸಮಿತಿ ಸಭೆ ನಡೆಯಲಿದೆ ಎಂದರು.
ರಾಜ್ಯಾದ್ಯಂತ ಬಿಜೆಪಿ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಯಾತ್ರೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಇದು ಬಿಜೆಪಿಯ ಬಗ್ಗೆ ಜನ ಹೊಂದಿರುವ ವಿಶ್ವಾಸವನ್ನು ತೋರಿಸುತ್ತದೆ. ಬಿಜೆಪಿ ಸರ್ಕಾರದ ಐದು ವರ್ಷಗಳ ಅಭಿವೃದ್ಧಿ ಪರ ಆಡಳಿತವನ್ನು ಮೆಚ್ಚಿ ಮತ್ತೆ ರಾಜ್ಯದ ಜನ ಪಕ್ಷವನ್ನು ಅಧಿಕಾರಕ್ಕೆ ತರುವುದು ನಿಶ್ಚಿತ ಎಂದು ಹೇಳಿದರು.
ಗೊಂದಲ ಆಡಳಿತದ ಮೇಲೆ ಪರಿಣಾಮ ಬೀರಿಲ್ಲ: ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಹಲವು ಗೊಂದಲಗಳಿದ್ದುದು ನಿಜ. ಆದರೆ, ಅದರ ಪರಿಣಾಮ ಆಡಳಿತದ ಮೇಲೆ ಬೀಳದಂತೆ ನೋಡಿಕೊಳ್ಳಲಾಗಿದೆ. ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿರುವುದೇ ಸರ್ಕಾರದ ಉತ್ತಮ ಸಾಧನೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿ ಕಾರಿದ ಅವರು, ಆ ಪಕ್ಷ ಕೇವಲ ಇಂದಿರಾಗಾಂಧಿ ಕುಟುಂಬಕ್ಕಷ್ಟೇ ಸೀಮಿತವಾಗಿದೆ. ಆ ಕುಟುಂಬ ಇಲ್ಲ ಎಂದರೆ ಕಾಂಗ್ರೆಸ್ ಪಕ್ಷವೂ ಇಲ್ಲ ಎನ್ನುವ ಪರಿಸ್ಥಿತಿ ಇದೆ. ಆದರೆ, ಬಿಜೆಪಿ ತತ್ವ, ನಿಷ್ಠೆ ಹೊಂದಿರುವ ಕಾರ್ಯಕರ್ತರನ್ನೊಳಗೊಂಡ ಪಕ್ಷ. ಹೀಗಾಗಿ ಯಾರೇ ಬಂದರೂ ಬಿಜೆಪಿಯನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದರು.
ಈ ಹಿಂದೆ ಬಿಜೆಪಿ ಅಧಿಕಾರಕ್ಕೆ ಬರುವ ಬಗ್ಗೆ ಭಯ ಇತ್ತು. ಆದರೆ, ಈಗ ರಾಜ್ಯಾದ್ಯಂತ ಪಕ್ಷಕ್ಕೆ ಸಿಗುತ್ತಿರುವ ಜನ ಬೆಂಬಲ ನೋಡಿ ಭಯ ದೂರವಾಗಿದೆ. ಈ ಜನ ಬೆಂಬಲ ನೋಡಿ ಕಾಂಗ್ರೆಸ್ ನಾಯಕರು ಬೆದರಿದ್ದಾರೆ ಎಂದು ವ್ಯಂಗ್ಯವಾಡಿದರು.
ಹಗರಣಗಳಿಲ್ಲದ ಜನಪರ ಆಡಳಿತ: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಡಿ.ವಿ. ಸದಾನಂದಗೌಡ ಅವರು ಮಾತನಾಡಿ, ತಮ್ಮ ಹಾಗೂ ಜಗದೀಶ್ ಶೆಟ್ಟರ್ ಅವರ ಆಡಳಿತಾವಧಿಯಲ್ಲಿ ಯಾವುದೇ ಹಗರಣಗಳಿಲ್ಲದೆ ಸ್ವಚ್ಛ ಆಡಳಿತವನ್ನು ಬಿಜೆಪಿ ನೀಡಿದೆ. ಹೀಗಾಗಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಹಗರಣಗಳಿಲ್ಲದ ಜನಪರ ಆಡಳಿತ ನೀಡುವುದು ಖಚಿತ. ಆದ್ದರಿಂದ ಈ ಹಿಂದೆ ಮಾಡಿರುವ ತಪ್ಪುಗಳನ್ನು ಮನ್ನಿಸಿ ಅದನ್ನು ತಿದ್ದಿಕೊಂಡು ಕೆಲಸ ಮಾಡಲು ಪಕ್ಷಕ್ಕೆ ಮತ್ತೊಂದು ಅವಕಾಶ ನೀಡಿ ಎಂದು ಜನರನ್ನು ಕೋರಲಾಗುವುದು ಎಂದರು.
ಉಪಮುಖ್ಯಮಂತ್ರಿ ಆರ್. ಅಶೋಕ ಸೇರಿದಂತೆ ಪಕ್ಷದ ಇತರೆ ಮುಖಂಡರು ಕಾರ್ಯಕ್ರಮದಲ್ಲಿ ಹಾಜರಿದ್ದರು.