ವಾಲ್ಮೀಕಿ ನಾಯಕರನ್ನು ಸೋಲಿಸಿ ಮನೆಗೆ ಕಳಿಸಿ..
ಚಿತ್ತಾಪುರ: ಶಾಸಕ ವಾಲ್ಮೀಕಿ ನಾಯಕ ಅವರು ನನ್ನ ಬೆನ್ನಿಗೆ ಚೂರಿ ಹಾಕಿ ದ್ರೋಹ ಬಗೆದಿದ್ದಾರೆ ಎಂದು ಮಾಜಿ ಸಿಎಂ ಹಾಗೂ ಕೆಜಿಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಇಲ್ಲಿನ ಅಂಬೇಡ್ಕರ್ ಚೌಕ್ ಬಳಿ ಶುಕ್ರವಾರ ಹಮ್ಮಿಕೊಂಡಿದ್ದ ಕೆಜೆಪಿ ನಡೆ ವಿಧಾನಸಭೆಯತ್ತ ನಡೆ ಕುರಿತು ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಶಾಸಕ ವಾಲ್ಮೀಕಿ ನಾಯಕ ಅವರನ್ನು ಕಳೆದ ಉಪಚುನಾವಣೆಯಲ್ಲಿ ಗೆಲ್ಲಿಸಲು ಗುಲ್ಬರ್ಗದಲ್ಲಿ 8 ದಿನ ವಾಸ್ತವ್ಯ ಮಾಡಿ ಹಗಲಿರುಳು ಶ್ರಮಿಸಿ ಗೆಲ್ಲಿಸಿ ಕ್ಷೇತ್ರದ ಅಭಿವೃದ್ಧಿಗೆ ನೂರಾರು ಕೋಟಿ ರು. ಅನುದಾನ ಒದಗಿಸಿದ್ದೇನೆ ಎಂದರು.
ಅನುದಾನ: ಇಲ್ಲಿನ ನಾಗಾವಿ ದೇವಸ್ಥಾನ ಹಾಗೂ ಬಳವಡಗಿ ಎಲ್ಲಮ್ಮ ದೇವಸ್ಥಾನ ಅಭಿವೃದ್ಧಿಗೆ ತಲಾ ಒಂದು ಕೋಟಿ ರು., ಅಗ್ನಿಶಾಮಕ ದಳ, ಶುದ್ಧ ಕುಡಿವ ನೀರಿನ ಘಟಕ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅನುದಾನ ಕಲ್ಪಿಸಿಲಾಗಿದೆ ಎಂದರು. ದ್ರೋಹ ಮಾಡಿದ ವಾಲ್ಮೀಕಿ ಅವರನ್ನು ಸೋಲಿಸಿ ಮನೆಗೆ ಕಳುಹಿಸಿ ಪಾಠ ಕಲಿಸಬೇಕು. ಈ ಬಾರಿ ಗುರುನಾಥ ಅವರನ್ನು ಗೆಲ್ಲಿಸುವ ಮೂಲಕ ಮತದಾರರು ಕೆಜೆಪಿಗೆ ಬೆಂಬಲಿಸಬೇಕು. ಚಿತ್ತಾಪುರ ಹಾಗೂ ಗುಲ್ಬರ್ಗ ಗ್ರಾಮೀಣ ಕ್ಷೇತ್ರ ಅಭಿವೃದ್ಧಿಗಾಗಿ ದತ್ತು ಪಡೆಯುವುದಾಗಿ ಭರವಸೆ ನೀಡಿದರು. ಸಚಿವ ರೇವು ನಾಯಕ ಬೆಳಮಗಿ ಅವರು ನನ್ನ ಬೆನ್ನಿಗೆ ಚೂರಿ ಹಾಕಿ ದ್ರೋಹ ಬಗೆದಿದ್ದಾರೆ. ಅವರನ್ನು ಸಹ ಸೋಲಿಸಿ ಇತಿಹಾಸ ನಿರ್ಮಿಸಬೇಕೆಂದು ಮತದಾರರಿಗೆ ಮನವಿ ಮಾಡಿದರು.
ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾಧ್ಯಕ್ಷ ಸುನೀಲ್ ವಲ್ಯಾಪುರೆ, ರಾಜ್ಯ ಕಾರ್ಯದರ್ಶಿ ತಿಪ್ಪಣ್ಣ ಕಮಕನೂರ, ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮುಖಡಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ಕರಿಸಿದ್ದಪ್ಪ ಪಾಟೀಲ್, ಅಭ್ಯರ್ಥಿ ಸಿ. ಗುರುನಾಥ, ಮುಖಂಡರಾದ ಎಚ್. ಎಂ. ಬಗದಲಿ, ಶರಣಗೌಡ ಸಂಕನೂರ, ಅಬ್ದುಲ್ ಹಾಜಿಮಿಯಾ, ರವಿ ಮಾತನಾಡಿದರು. ಸುಭಾಷ ಬಿರಾದಾರ, ಚಂದ್ರಶೇಖರ ಅವಂಟಿ, ಗೋಪಾಲ್ ರಾಠೋಡ, ಚೆನ್ನಣ್ಣ ಬಾಳಿ, ಜಾವೇದ ಪಟೇಲ್ ದಿಗ್ಗಾಂವ, ಶಾಂತಕುಮಾರ ಮಳಖೇಡ, ಸಿದ್ರಾಮಯ್ಯ ಗೊಂಬಿಮಠ, ಅರ್ಜುನ ಗಂಗಾಣಿ, ಪುರಸಭೆ ಕೆಜೆಪಿ ಸದಸ್ಯರು ಹಾಗೂ ಇತರರಿದ್ದರು.