11ರಂದು ಧಾರ್ಮಿಕ ದಿನಾಚರಣೆ
ಗುಲ್ಬರ್ಗ: ಜಿಲ್ಲೆಯ ಅಫಜಲ್ಪುರ ತಾಲೂಕಿನ ಘತ್ತರಗಾ ಗ್ರಾಮದ ಭಾಗ್ಯವಂತಿ ದೇವಸ್ಥಾನದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಏ. 11ರಂದು ಧಾರ್ಮಿಕ ದಿನವೆಂದು ಆಚರಿಸಲಾಗುವುದು. ಧಾರ್ಮಿಕ ಇಲಾಖೆ ಆಯುಕ್ತರು ಸುತ್ತೋಲೆಯನ್ನು ಹೊರಡಿಸಿ ಒಂದು ವರ್ಷದಲ್ಲಿ ಒಂದು ದಿನವನ್ನು ವಿವಿಧ ಇಲಾಖೆಗಳು ಆಚರಿಸುವಂತೆ ಧಾರ್ಮಿಕ ಇಲಾಖೆಯು ಸಹ ಯುಗಾದಿ ಹಬ್ಬದಂದು ಧಾರ್ಮಿಕ ದಿನವೆಂದು ಆಚರಿಸುವಂತೆ ಆದೇಶಿಸಿದ್ದಾರೆ. ಸದರಿ ದಿನದಂದು ಸಾರ್ವಜನಿಕ ಭಕ್ತಾದಿಗಳ ಗಮನವನ್ನು ಸೆಳೆಯುವ ಬಗ್ಗೆ ವಿಶೇಷ ಪೂಜೆ, ಭಜನೆ, ಕೀರ್ತನೆ, ಪ್ರಸಾದ ವಿತರಣೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಈ ಧಾರ್ಮಿಕ ದಿನವನ್ನು ವಿಜೃಂಭಣೆಯಿಂದ ಆಚರಿಸಬೇಕೆಂದು ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಫಜಲ್ಪುರ ತಾಲೂಕಿನ ಘತ್ತರಗಾ ಗ್ರಾಮದ ಭಾಗ್ಯವಂತಿ ದೇವಸ್ಥಾನದಲ್ಲಿ ಏ. 11ರ ಯುಗಾದಿ ಹಬ್ಬದ ದಿನದೆಂದು ಧಾರ್ಮಿಕ ದಿನ ವಿಜೃಂಭಣೆಯಿಂದ ಆಚರಿಸಲಾಗುವುದು. ಏ. 10ರಂದು ಸಂಜೆ 8 ಗಂಟೆಯಿಂದ 10 ಗಂಟೆಯವರೆಗೆ ಲಕ್ಷ ದೀಪೋತ್ಸವ ಜತೆಗೆ ಉದ್ಘಾಟನೆ ಕಾರ್ಯಕ್ರಮ ಹಾಗೂ 11 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 9 ಗಂಟೆಯವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಸಹಾಯಕ ಆಯುಕ್ತರು ತಿಳಿಸಿದ್ದಾರೆ.
ಬೇಸಿಗೆ ತರಬೇತಿ ಶಿಬಿರ
ಗುಲ್ಬರ್ಗ: ಗುಲ್ಬರ್ಗದ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯು ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಏ. 10 ರಿಂದ 30ರವರೆಗೆ ಕ್ರಿಕೆಟ್ ಹಾಗೂ ಟೆನ್ನಿಸ್ ಕ್ರೀಡೆಗಳನ್ನು 10 ವರ್ಷದಿಂದ 16 ವರ್ಷದೊಳಗಿನ ಬಾಲಕ-ಬಾಲಕಿಯರಿಗೆ ಬೇಸಿಗೆ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದೆ. ಆಸಕ್ತಿಯುಳ್ಳ ಕ್ರೀಡಾಪಟುಗಳು ತರಬೇತಿ ಶಿಬಿರದಲ್ಲಿ ಭಾಗವಹಿಸಲು ಕೋರಲಾಗಿದೆ. ವಿವರಕ್ಕೆ ವಿಶ್ವನಾಥ ಕ್ರಿಕೆಟ್ ಹಾಗೂ ಟೆನ್ನಿಸ್ ತರಬೇತುಗಾರ- 9880212769, 08472-278637 ಸಂಪರ್ಕಿಸಿ.
ವಾರ್ಷಿಕ ವಿಶೇಷ ಶಿಬಿರ
ಗುಲ್ಬರ್ಗ: ನಗರದ ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ನಡೆಯಿತು. ಗುವಿವಿ ಮೌಲ್ಯಮಾಪನ ಕುಲಸಚಿವ ಪ್ರೊ. ಶರಣಪ್ಪ ವಿ. ಹಲ್ಸೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ರಾಷ್ಟ್ರೀಯ ಸೇವಾ ಯೋಜನೆಯ ಧ್ಯೇಯ ಉದ್ದೇಶಗಳನ್ನು ತಿಳಿಸಿದರು. ಬಸವೇಶ್ವರ ಕಾಯಕ ದಾಸೋಹ ಕಲ್ಪನೆಯ ಬಗ್ಗೆ ವಿವರಿಸುತ್ತಾ, ವಿದ್ಯಾರ್ಥಿಗಳು ಕೆಲಸ ಮಾಡುವುದರ ಜತೆಗೆ ಸೇವಾ ಮನೋಭಾವನೆ, ಶಿಸ್ತು, ಸಂಯಮ, ತಾಳ್ಮೆ, ಸಹಬಾಳ್ವೆ ಇತ್ಯಾದಿ ಗುಣಗಳನ್ನು ಬೆಳಸಿಕೊಂಡು ಹೋಗಲು ರಾಷ್ಟ್ರೀಯ ಸೇವಾ ಯೋಜನೆ ಸಹಾಯಕಾರಿಯಾಗುತ್ತದೆ ಎಂದು ಹೇಳಿದರು. ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ.ಎಲ್. ಇಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರೊ. ದಯಾನಂದ ಹೊಡೆಲ್ ಪ್ರಾರ್ಥನೆ ಗೀತೆ ಹಾಡಿದರು. ಪ್ರೊ. ಎನ್.ಎಸ್. ಪಾಟೀಲ್ ಸ್ವಾಗತಿಸಿದರು. ಡಾ. ದಶರಥ ಮೇತ್ರೆ ನಿರೂಪಿಸಿದರು. ಪ್ರೊ. ಸುನಂದಾ ವಂದಿಸಿದರು.