ಭ್ರೂಣಲಿಂಗ ಪತ್ತೆ, ಗರ್ಭಪಾತ ತಡೆಗೆ ಶ್ರಮಿಸಿ: ನೀಲಾ
ಕನ್ನಡಪ್ರಭ ವಾರ್ತೆ, ಆಳಂದ, ಏ.7
ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುವ ಆಶಾ ಕಾರ್ಯಕರ್ತೆಯರು ಹೆಣ್ಣು ಭ್ರೂಣಲಿಂಗ ಪತ್ತೆ ಹಾಗೂ ಗರ್ಭಪಾತ ತಡೆಗೆ ಸಾರ್ವಜನಿಕರಲ್ಲಿ ಮನವೊಲಿಸುವ ಕಾರ್ಯ ಮಾಡಬೇಕಾಗಿದೆ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ. ನೀಲಾ ಕರೆ ನೀಡಿದರು.
ಪಟ್ಟಣದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಶಾ ಕಾರ್ಯಕರ್ತೆಯರಿಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಕಾನೂನು ಮತ್ತು ಸಮಾಜವನ್ನು ಅರಿತುಕೊಂಡು ಮಹಿಳೆಯರಿಗೆ ಸಲಹೆ ನೀಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು. ಪಿಎನ್ಡಿಟಿ ಮತ್ತು ಪಿಸಿ ಕಾಯ್ದೆ ಅನುಷ್ಠಾನಕ್ಕೆ ರಾಜ್ಯದ ಜಿಲ್ಲಾ ಮಟ್ಟದ ಕಮಿಟಿ ರಚಿಸಲಾಗಿದೆಯಾದರೂ ಕಮಿಟಿ ಸದಸ್ಯರು ಎಲ್ಲೂ ಕಾರ್ಯನಿರ್ವಹಿಸಿಲ್ಲ ಎಂದರು. ತಹಸೀಲ್ದಾರ್ ಜಿ.ಕೆ. ಖಾಲೀಕ್ ಕಾರ್ಯಾಗಾರವನ್ನು ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ. ಸುಚಿತ್ರಾ ಬಿಲಗುಂದಿ ಅವರು ಮಾತನಾಡಿದರು. ಆರೋಗ್ಯ ಸಹಾಯಕಿ ಎನ್.ಡಿ. ಹಳ್ಳಿ, ಆಶಾ ಮೇಲ್ವಿಚಾರಕಿ ಮರಿಯಮ್ಮ ಇತರರು ಇದ್ದರು. ಆರೋಗ್ಯ ಶಿಕ್ಷಣಾಧಿಕಾರಿ ಸೋಮು ರಾಠೋಡ ನಿರೂಪಿಸಿದರು.