ಮುಗಿದ ಟಿಕೆಟ್ ಗೊಂದಲ
-ನಾರಾಯಣ ಸಗರ
ಶಹಾಪುರ: ಯಾರು ಯಾವ ಪಕ್ಷದಲ್ಲಿರುತ್ತಾರೆ ಎಂಬ ಗೊಂದಲಕ್ಕೆ ಸಂಪೂರ್ಣ ತೆರೆಬಿದ್ದಿದೆ. ಬಹುತೇಕವಾಗಿ ಟಿಕೆಟ್ ಗೊಂದಲ ಮುಗಿದಂತಾಗಿದೆ. ಇನ್ನೇನಿದ್ದರೂ ಅಖಾಡಕ್ಕಿಳಿಯಲು ಸಿದ್ಧರಾದ ವಿವಿಧ ಪಕ್ಷದ ಅಭ್ಯರ್ಥಿಗಳು ಮತದಾರರ ಮನಮೊಲಿಸಲು ವಿವಿಧ ತಂತ್ರಗಳನ್ನು ಹೆಣೆಯುತ್ತಿದ್ದು, ಸಣ್ಣಪುಟ್ಟ ಗೊಂದಲಗಳನ್ನು ಸರಿಪಡಿಸಿಕೊಳ್ಳುತ್ತ ನಾಮಪತ್ರ ತುಂಬಲು ಸಜ್ಜಾಗಿದ್ದಾರೆ.
ಆತಂಕ: ಕಾಂಗ್ರೆಸ್‌ನಿಂದ ಹಾಲಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿದೆ. ಆದರೂ ರಾಜ್ಯ ಹಾಗೂ ಕೇಂದ್ರದ ಮುಖಂಡರು ಕೆಲ ದಿನಗಳವರೆಗೆ ಗುಟ್ಟು ಬಿಟ್ಟುಕೊಡುವುದೇ ಇರುವುದು ಅವರ ಅಭಿಮಾನಿಗಳಲ್ಲಿ, ಕಾರ್ಯಕರ್ತರಲ್ಲಿ ಆತಂಕವುಂಟಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುವ ಮೂಲಕ ಮತ್ತೊಮ್ಮೆ ಜನಾದೇಶ ಪಡೆಯಲು ಅಭಿವೃದ್ಧಿ ಮುಂದಿಟ್ಟುಕೊಂಡು ಹಿರಿಯ ಮುಖಂಡರನ್ನು ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿಯಾಗುವ ಕಾರ್ಯ ಆರಂಭಿಸಿದ್ದಾರೆ. ಇನ್ನು ಪುರಸಭೆ ಚುನಾವಣೆಯಲ್ಲಿ ಪಕ್ಷೇತರರಾಗಿ ಅಭ್ಯರ್ಥಿಗಳನ್ನು ನಿಲ್ಲಿಸುವ ಮೂಲಕ ದಿ. ಶಿವಶೇಖರಪ್ಪಗೌಡ ಶಿರವಾಳ ಅಭಿಮಾನಿಗಳು ಕಾರ್ಯಕರ್ತರನ್ನು ಒಂದೆಡೆ ಕರೆತಂದು ಸಾಮರ್ಥ್ಯ ಪ್ರದರ್ಶಿಸಿದ ಯುವ ಮುಖಂಡ ಗುರುಪಾಟೀಲ ಶಿರವಾಳ ಈಗ ಕೆಜೆಪಿ ಅಭ್ಯರ್ಥಿಯಾಗಿದ್ದಾರೆ. ಹಿಂದೆ ದಿ. ಶಿವಶೇಖರಪ್ಪಗೌಡರು ಜನಸಾಮಾನ್ಯರಿಗೆ ಸ್ಪಂದಿಸಿದ ಕಾರ್ಯಕ್ರಮಗಳನ್ನು ನೆನಿಪಿಸುತ್ತ ಪ್ರಸ್ತುತವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜನಪರ ಕಾರ್ಯ ಮುಂದಿಟ್ಟುಕೊಂಡು ಪ್ರಚಾರ ಆರಂಭಿಸಿದ್ದಾರೆ.
ರಾಜಕೀಯ ಜಾಗೃತಿ: ಇನ್ನು ರೈತ ಮುಖಂಡರೆಂದೇ ಬಿಂಬಿತವಾಗಿರುವ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಶರಣಪ್ಪ ಸಲಾದಪುರ ಜೆಡಿಎಸ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಕೇವಲ ದರ್ಶನಾಪುರ ಹಾಗೂ ಶಿರವಾಳ ಕುಟುಂಬಕ್ಕೆ ಕ್ಷೇತ್ರದ ರಾಜಕೀಯ ಸೀಮಿತವಾಗಬೇಕೆ, ಬೇರೆಯವರಿಗೆ ಅವಕಾಶ ಬೇಡವೆ ಎಂದು ರಾಜಕೀಯ ಜಾಗೃತಿ ಮೂಡಿಸುತ್ತ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರ 20 ತಿಂಗಳ ಅಧಿಕಾರವನ್ನು ನೆನಪಿಸುತ್ತಿದ್ದಾರೆ.
ಚುನಾವಣಾ ತಂತ್ರ: ಇನ್ನು ಬಿಜೆಪಿ ಪ್ರಾರಂಭದ ದಿನಗಳಿದ್ದ ಹಳೆಯ ಕಾರ್ಯಕರ್ತರ ಪಡೆಯನ್ನೇ ಹೊಂದಿದೆ. ಬಿಜೆಪಿ ಜಿಲ್ಲಾಧ್ಯಕ್ಷ ವೀರಣ್ಣಗೌಡ ಮಲ್ಲಾಬಾದಿಯವರ ಹೆಸರೇ ಅಂತಿಮಗೊಳ್ಳುವ ಸಾಧ್ಯತೆಯಿದೆ. ಬಿಎಸ್‌ಆರ್ ಸಂಸ್ಥಾಪಕ ಶ್ರೀರಾಮುಲು ಅವರು ನೆಡೆಸಿಕೊಂಡು ಬಂದ ಹೋರಾಟಗಳು, ಪಾದಯಾತ್ರೆ, ಜನಜಾಗೃತಿಯ ಕಾರ್ಯಗಳನ್ನು ಜನತೆಯ ಮುಂದಿಡುವತ್ತ ಸಾರ್ಥಕ ಪ್ರಯತ್ನ ಹಾಕುತ್ತಿದ್ದಾರೆ.
--