ರಂಗಭೂಮಿ ನೈತಿಕತೆ ಆಧಾರದ ಮೇಲೆ ನಡೆಯಲಿ: ಚಂದ್ರಕಾಂತ
ಕ.ಪ್ರ.ವಾರ್ತೆ, ಗುಲ್ಬರ್ಗ, ಏ.7
ಕರ್ನಾಟಕ ನಾಟಕ ಅಕಾಡೆಮಿ, ಇಂಡಿಯನ್ ಕಲ್ಚರಲ್ ಸೆಂಟರ್ ಮತ್ತು ಚಾರಿಟಬಲ್ ಟ್ರಸ್ಟ್ ಹಾಗೂ ರಂಗಸಂಗಮ ಕಲಾ ವೇದಿಕೆ ಸಂಯುಕ್ತಾಶ್ರಯದಲ್ಲಿ ಆದರ್ಶ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಆಚರಿಸಲಾಯಿತು.
ಟಿ.ಪಿ. ಕೈಲಾಸಂ ಹವ್ಯಾಸಿ ಕಲಾ ತಂಡದ ಅಧ್ಯಕ್ಷ ಚಂದ್ರಕಾಂತ ಹೊಸಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ಕೇವಲ ಹಣಕ್ಕಾಗಿ ಮತ್ತು ಹೆಸರಿಗಾಗಿ ರಂಗಭೂಮಿಯ ಬೆಳವಣಿಗೆ ಕಾಣುತ್ತಿದ್ದೇವೆ. ಅದು ಕಾಟಾಚಾರಕ್ಕಾಗಿದೆ. ನೈತಿಕತೆ ಆಧಾರದ ಮೇಲೆ ನಡೆಯಲಿ ಮತ್ತು ನಾವೆಲ್ಲ ರಂಗ ಕಲಾವಿದರು ಸೇರಿಕೊಂಡು ಹೊಸದೊಂದು ಆಶಾ ಚೈತನ್ಯವನ್ನು ಕಟ್ಟೋಣವೆಂದು ಅಭಿಪ್ರಾಯಪಟ್ಟರು.
ಯುವರಂಗ ನಿರ್ದೇಶಕ ರಾಘವೇಂದ್ರ ಹೊಸಮನಿ ಮಾತನಾಡಿ, ವಿಶ್ವ ರಂಗಭೂಮಿ ದಿನಾಚರಣೆ ಮಾಡುವುದರ ಮೂಲಕ ಯುವ ರಂಗ ಕಲಾವಿದರಿಗೆ ಪ್ರೇರಣೆ ಮತ್ತು ಸ್ಫೂರ್ತಿಯಾಗಿರುತ್ತದೆ. ರಂಗವೆಂದರೆ ಅದೊಂದು ಕೇವಲ ಆಟದ ಮೈದಾನವಲ್ಲ. ಅದು ಜೀವನಕ್ಕೆ ಸ್ಫೂರ್ತಿ ಸೆಲೆ ಮತ್ತು ಜೀವನದ ಚಿತ್ರಣವನ್ನು ಬಿಚ್ಚಿಡುತ್ತದೆ ಎಂದು ಹೇಳಿದರು.
ಕಲಾವಿದ ಡಾ. ಪಿ. ಪರಶುರಾಮ ಅತಿಥಿಗಳಾಗಿ ಆಗಮಿಸಿದ್ದರು. ಗುವಿವಿ ಸ್ನಾತಕೋತ್ತರ ವಿದ್ಯಾರ್ಥಿ ವಿಜಯಕುಮಾರ ಬಿಳಗೆ ಇದ್ದರು. ಸಂದೀಪ ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಕುಮಾರ ಬೆಳಗಿ ಹಾಗೂ ಸಂಗಡಿಗರು ರಂಗಗೀತೆಗಳು ಹಾಡಿದರು. ರಾಜಕುಮಾರ ಮಾಳಗೆ ಕಾರ್ಯಕ್ರಮ ನಿರೂಪಿಸಿದರು. ಜಗನ್ನಾಥ ವಂದಿಸಿದರು.
--