ಸ್ಪಷ್ಟವಾಗುತ್ತಿದೆ ಜಿಲ್ಲೆಯ ಚುನಾವಣಾ ಅಖಾಡ
ಕನ್ನಡಪ್ರಭ ವಾರ್ತೆ, ಯಾದಗಿರಿ, ಏ.7
ಜಿಲ್ಲೆಯ ನಾಲ್ಕೂ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಪಕ್ಷ ಅಂತಿಮಗೊಳಿಸಿರುವುದರಿಂದ ಚುನಾವಣಾ ಕಣದ ಚಿತ್ರಣ ಸ್ಪಷ್ಟಗೊಳ್ಳುತ್ತಿದೆ. ಪಕ್ಷದಲ್ಲೇ ಪೈಪೋಟಿ ಇದ್ದರೂ, ಅಂತಿಮವಾಗಿ ಮೂವರು ಹಾಲಿ ಕಾಂಗ್ರೆಸ್ ಶಾಸಕರು ಮತ್ತೆ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕರೂ ಈ ನಿಟ್ಟಿನಲ್ಲಿ ಯಶಸ್ವಿಯಾಗಿದ್ದು, ಚುನಾವಣಾ ಕಣ ರಂಗೇರುವಂತೆ ಮಾಡಿದೆ.
2008ರಲ್ಲಿ ನಡೆದ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ಯಾದಗಿರಿ, ಶಹಾಪುರ ಹಾಗೂ ಗುರುಮಠಕಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲವು ಸಾಧಿಸಿದ್ದರು. ಕ್ರಮವಾಗಿ ಡಾ.ಮಾಲಕರೆಡ್ಡಿ, ದರ್ಶನಾಪುರ ಹಾಗೂ ಚಿಂಚನಸೂರ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ ಸುರಪುರದಲ್ಲಿ ಮಾತ್ರ ಬಿಜೆಪಿಯಿಂದ ಸ್ಪರ್ಧಿಸಿದ್ದ ರಾಜುಗೌಡ ಗೆಲವು ಸಾಧಿಸಿದ್ದರಿಂದ ರಾಜಾ ವೆಂಕಟಪ್ಪ ನಾಯಕರನ್ನು ಮಾಜಿಯನ್ನಾಗಿಸಿತ್ತು. ಆದರೆ ಈ ಬಾರಿ ಮೂವರು ಹಾಲಿ ಶಾಸಕರು ಹಾಗೂ ಸುರಪುರದಿಂದ ಮಾಜಿ ಶಾಸಕರು ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಚುನಾವಣಾ ಅಖಾಡದ ಚಿತ್ರಣ ಸ್ಪಷ್ಟವಾಗುತ್ತ ಸಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿ ಅಂತಿಮಗೊಳಿಸಿದ ಪ್ರಥಮ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಿದೆ.
ಕೈ ಪ್ರಬಲ: ಜಿಲ್ಲೆಯಲ್ಲಿ ಮೊದಲಿನಿಂದಲೂ ಕಾಂಗ್ರೆಸ್ ಪ್ರಬಲವಾಗಿದೆ. ಆದ್ದರಿಂದ ಇತರ ಎಲ್ಲಾ ಪಕ್ಷಗಳ ಅಭ್ಯರ್ಥಿಗಳಿಗೂ ಕಾಂಗ್ರೆಸ್ ನೇರ ಎದುರಾಳಿಯಾಗಿದೆ. ಯಾದಗಿರಿಯಲ್ಲಿ ಡಾ.ಮಾಲಕರೆಡ್ಡಿ ಅವರಿಗೆ ಕೆಜೆಪಿ ಅಭ್ಯರ್ಥಿ ಡಾ.ವೀರಬಸವಂತರೆಡ್ಡಿ ಮುದ್ನಾಳ ತೀವ್ರ ಸ್ಪರ್ಧೆ ಒಡ್ಡಲು ಸಿದ್ಧರಾಗಿದ್ದಾರೆ.
ಇಬ್ಬರು ಡಾಕ್ಟರ್ಗಳ ನಡುವೆ ಇಲ್ಲಿ ಜಿದ್ದಾಜಿದ್ದಿ ಏರ್ಪಡುವುದು ನಿಶ್ಚಿತವಾಗಿದೆ. ಜೆಡಿಎಸ್ ಹಾಗೂ ಬಿಜೆಪಿ ಕ್ಷೇತ್ರದಲ್ಲಿ ಇನ್ನೂ ಅಭ್ಯರ್ಥಿಗಳ ಹೆಸರನ್ನು ಘೋಷಿಸಿಲ್ಲ. ಬಿಎಸ್ಸಾರ್ ಕಾಂಗ್ರೆಸ್ನಿಂದ ಮೌಲಾಲಿ ಅನಪುರ ಹೆಸರು ಅಂತಿಮಗೊಂಡಿದ್ದು, ಪ್ರಚಾರ ಕಾರ್ಯವನ್ನು ಶುರುಮಾಡಿಕೊಂಡಿದ್ದಾರೆ. ಮಾಲಕರೆಡ್ಡಿ ಹಾಗೂ ಮುದ್ನಾಳ ಅವರೂ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.
ದರ್ಶನಕ್ಕೆ ಶಿರವಾಳ ಅಡ್ಡಿ: ಶಹಾಪುರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ಮತ್ತೆ ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದಾರೆ. 2008ರ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ನಿಂದ ಕಾಂಗ್ರೆಸ್ ಸೇರಿ ಆಯ್ಕೆಯಾಗಿದ್ದರು. ಈ ಬಾರಿಯೂ ಕಾಂಗ್ರೆಸ್ ಟಿಕೆಟ್ ನೀಡಿದ್ದು, ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದ್ದಾರೆ. ಆದರೆ ಶಿರವಾಳ ಕುಟುಂಬದ ಗುರು ಪಾಟೀಲ ಅವರು ಕೆಜೆಪಿಯಿಂದ ಸ್ಪರ್ಧಿಸುತ್ತಿದ್ದು, ಇವರಿಬ್ಬರ ನಡುವೆ ನಿಕಟ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ. ಶಹಾಪುರ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಶರಣಪ್ಪ ಸಲಾದಪುರ, ಬಿಜೆಪಿಯಿಂದ ಡಾ.ವೀರನಗೌಡ ಮಲ್ಲಾಬಾದಿ ಸ್ಪರ್ಧಿಸುತ್ತಿದ್ದಾರೆ. ಬಿಎಸ್ಸಾರ್ನಿಂದ ಶಂಕ್ರಣ್ಣ ವಣಿಕ್ಯಾಳ ಹೆಸರು ಅಂತಿಮಗೊಳ್ಳುವ ಸಾಧ್ಯತೆಯಿದೆ.
ಕೈಬಿಡದ ಚಿಂಚನಸೂರ: ಗುರುಮಠಕಲ್ ಕ್ಷೇತ್ರದ ಹಾಲಿ ಶಾಸಕ ಬಾಬುರಾವ ಚಿಂಚನಸೂರ ಅವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಕಾರ್ಯಕರ್ತರಿಂದಲೇ ವಿರೋಧ ವ್ಯಕ್ತವಾಗಿದ್ದರೂ ಕೈ ನಾಯಕರು ಚಿಂಚನಸೂರ ಅವರನ್ನು ಕೈ ಬಿಡಲಿಲ್ಲ. ಆದರೂ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿನ ಅಸಮಾಧಾನ ಹೊಗೆಯಾಡುತ್ತಲೇ ಇದೆ. ಚಿಂಚನಸೂರಗೆ ಟಿಕೆಟ್ ನೀಡಿದರೆ ಸಾಮೂಹಿಕ ರಾಜಿನಾಮೆ ಬೆದರಿಕೆ ಹಾಕಿರುವ ಕಾರ್ಯಕರ್ತರು ಮುಂದೆ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ. ಬಿಜೆಪಿಯ ಗಿರೀಶ್ ಮಟ್ಟೆಣ್ಣವರ, ಕೆಜೆಪಿಯ ವೆಂಕಟರಡ್ಡಿ ಮುದ್ನಾಳ, ಜೆಡಿಎಸ್ನ ನಾಗನಗೌಡ ಕಂದಕೂರ ಕಣಕ್ಕಿಳಿದಿದ್ದು, ಬಿಸ್ಸಾರ್ ಕಾಂಗ್ರೆಸ್ ಮಾತ್ರ ಅಭ್ಯರ್ಥಿ ಹೆಸರು ಘೋಷಿಸಿಲ್ಲ.
ಸುರಪುರದಲ್ಲಿ ಜಂಗೀ ಕುಸ್ತಿ: ಸುರಪುರ ಕ್ಷೇತ್ರದಲ್ಲಿ ಸದ್ಯ ಮಾಜಿಗಳದ್ದೇ ಜಿದ್ದಾಜಿದ್ದಿ. ರಾಜುಗೌಡ ಅವರು ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿ ಜೆಡಿಎಸ್ ಸೇರಿರುವುದರಿಂದ ಮಾಜಿಯಾಗಿದ್ದಾರೆ.
ಕಾಂಗ್ರೆಸ್ನಿಂದ ರಾಜಾ ವೆಂಕಟಪ್ಪನಾಯಕ ಅವರನ್ನು ಪಕ್ಷ ಕೈ ಬಿಡಲಿಲ್ಲ. ಬಿಜೆಪಿಯಿಂದ ಮಾಜಿ ಸಚಿವ ಮದನಗೋಪಾಲ ನಾಯಕ ಸ್ಪರ್ಧಿಸುತ್ತಿದ್ದು, ಕ್ಷೇತ್ರದಲ್ಲಿ ಕೆಜೆಪಿ ಹಾಗೂ ಬಿಸ್ಸಾರ್ ಕಾಂಗ್ರೆಸ್ ಅಭ್ಯರ್ಥಿಗಳಿಗಾಗಿ ಇನ್ನೂ ಹುಡುಕಾಟ ನಡೆಸುತ್ತಲೇ ಇದೆ.
ಆದ್ದರಿಂದ ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆಯೇ ನೇರ ಸ್ಪರ್ಧೆ ಏರ್ಪಡುವುದು ನಿಕ್ಕಿಯಾಗಿದೆ. ಮತದಾರರನ್ನು ಓಲೈಸಿಕೊಳ್ಳುವಲ್ಲಿ ಯಾವ ಮಾಜಿ ಯಶಸ್ವಿಯಾಗುತ್ತಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಜಿಲ್ಲೆಯ ಚುನಾವಣಾ ರಂಗ ಸಜ್ಜಿಕೆ ದಿನೇದಿನೇ ರಂಗೇರತೊಡಗಿದೆ. ಇನ್ನು ಕೆಲ ದಿನಗಳಲ್ಲಿ ಮತ್ತಷ್ಟು ಅಭ್ಯರ್ಥಿಗಳ ಹೆಸರು ಈ ಪಟ್ಟಿಯಲ್ಲಿ ಸೇರ್ಪಡೆಯಾಗಲಿದೆ. ಆಗ ಚುನಾವಣಾ ಕಣಕ್ಕೆ ಹೊಸ ರೂಪ ಬರಲಿದೆ. ಆ ದಿನಕ್ಕಾಗಿ ಬೆರಳೆಣಿಕೆಯಷ್ಟು ದಿನ ಕಾಯಲೇಬೇಕು.
-ನಾರಾಯಣ ಹೆಗಡೆ