11ರಂದು ಧಾರ್ಮಿಕ ದಿನಾಚರಣೆ
ಗುಲ್ಬರ್ಗ: ಗುಲ್ಬರ್ಗ ಜಿಲ್ಲೆಯ ಅಫಜಲ್ಪುರ ತಾಲೂಕಿನ ಘತ್ತರಗಾ ಗ್ರಾಮದ ಭಾಗ್ಯವಂತಿ ದೇವಸ್ಥಾನದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಏ. 11ರಂದು ಧಾರ್ಮಿಕ ದಿನವೆಂದು ಆಚರಿಸಲಾಗುವುದು.
ಧಾರ್ಮಿಕ ಇಲಾಖೆ ಆಯುಕ್ತರು ಸುತ್ತೋಲೆಯನ್ನು ಹೊರಡಿಸಿ ಒಂದು ವರ್ಷದಲ್ಲಿ ಒಂದು ದಿನವನ್ನು ವಿವಿಧ ಇಲಾಖೆಗಳು ಆಚರಿಸುವಂತೆ ಧಾರ್ಮಿಕ ಇಲಾಖೆಯು ಸಹ ಯುಗಾದಿ ಹಬ್ಬದಂದು ಧಾರ್ಮಿಕ ದಿನವೆಂದು ಆಚರಿಸುವಂತೆ ಆದೇಶಿಸಿದ್ದಾರೆ. ಸದರಿ ದಿನದಂದು ಸಾರ್ವಜನಿಕ ಭಕ್ತಾದಿಗಳ ಗಮನವನ್ನು ಸೆಳೆಯುವ ಬಗ್ಗೆ ವಿಶೇಷ ಪೂಜೆ, ಭಜನೆ, ಕೀರ್ತನೆ, ಪ್ರಸಾದ ವಿತರಣೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಈ ಧಾರ್ಮಿಕ ದಿನವನ್ನು ವಿಜೃಂಭಣೆಯಿಂದ ಆಚರಿಸಬೇಕೆಂದು ಆದೇಶಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅಫಜಲ್ಪುರ ತಾಲೂಕಿನ ಘತ್ತರಗಾ ಗ್ರಾಮದ ಭಾಗ್ಯವಂತಿ ದೇವಸ್ಥಾನದಲ್ಲಿ ಏ. 11ರ ಯುಗಾದಿ ಹಬ್ಬದ ದಿನದೆಂದು ಧಾರ್ಮಿಕ ದಿನ ವಿಜೃಂಭಣೆಯಿಂದ ಆಚರಿಸಲಾಗುವುದು. ಏ. 10ರಂದು ಸಂಜೆ 8 ಗಂಟೆಯಿಂದ 10 ಗಂಟೆಯವರೆಗೆ ಲಕ್ಷ ದೀಪೋತ್ಸವ ಜತೆಗೆ ಉದ್ಘಾಟನೆ ಹಾಗೂ 11 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 9 ಗಂಟೆಯವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಸಹಾಯಕ ಆಯುಕ್ತರು ತಿಳಿಸಿದ್ದಾರೆ.