ನೀರು ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ
ಕನ್ನಡಪ್ರಭವಾರ್ತೆ, ಲಿಂಗಸ್ಗೂರು ಏ.8,
ತಾಲೂಕಿನ ಆನ್ವರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಿರೇನಗನೂರು ಮತ್ತು ಚುಕನಟ್ಟಿ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಗ್ರಾಮಸ್ಥರು ತಾಪಂ ಕಚೇರಿವರೆಗೆ ಸೋಮವಾರ ಪ್ರತಿಭಟನೆ ನಡೆಸಿದರು.
ಆನ್ವರಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಹಿರೇನಗನೂರು ಮತ್ತು ಚುಕನಟ್ಟಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಜನ- ಜಾನುವಾರುಗಳು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ ಹಾಗೂ ಅನೇಕ ರೋಗ- ರುಜನುಗಳು ಹರಡುವ ಭೀತಿ ಎದುರಾಗಿದೆ.
ಇದರಿಂದ ಗ್ರಾಮದ ಜನತೆ ನೀರಿಲ್ಲದೆ ಒಕ್ಕಲುತನ ಸ್ಥಗಿತಗೊಳಿಸಿ ಗುಳೆ ಹೋಗಲು ನಿರ್ಧರಿಸಿದ್ದಾರೆ.
ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆಂದು ಆರೋಪಿಸಿದರು.
ಕೂಡಲೇ ಸಮಸ್ಯೆ ಅರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸಂಬಂಧಿಸಿದ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸಬೇಕು. ಇಲ್ಲದಿದ್ದರೆ ತಾಪಂ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸಬೇಕಾಗುತ್ತದೆಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆ ಅಧ್ಯಕ್ಷ ಬಾಲನಗೌಡ ಪಾಟೀಲ, ಸಂ.ಕಾರ್ಯದರ್ಶಿ ಮುತ್ತಣ್ಣ ಹಡಪದ, ಕಾರ್ಯಾಧ್ಯಕ್ಷ ಶಿವಪುತ್ರ ಗಾಣದಾಳ, ರಮೇಶ ಕಟ್ಟಿಮನಿ, ತಿರುಪತಿ, ಮಲ್ಲೇಶ ಮ್ಯಾಗೇರಿ, ಗ್ರಾಮಸ್ಥರಾದ ವಿರುಪಾಕ್ಷಪ್ಪ ಮಾಲಿಪಾಟೀಲ, ಅಯ್ಯನಗೌಡ ನಗರ, ಮುದುಬಸಪ್ಪ ಕುರುಗೋಡಿ, ನಾಗರಡ್ಡೆಪ್ಪ ತವಗ, ಬಸವರಾಜ ಕಡ್ಡೋಣಿ, ಅಯ್ಯಾಳಪ್ಪ ಹೊರಪೇಟ, ಫಕೀರಸಾಬ ಅಪ್ಪಾಸಾಬ, ಬಸವರಾಜಪ್ಪ ತವಗ, ವೀರಭದ್ರಪ್ಪ ಕುರುಗೋಡಿ, ಬಸವರಾಜ ಕುರುಗೋಡಿ ಸೇರಿದಂತೆ ಇತರರು ಇದ್ದರು.