'ಕಲಾರತ್ನ' ಪ್ರದಾನ (ಸುದ್ದಿ ಸಂಕ್ಷೇಪ)
ಸುರಪುರ: ತಾಲೂಕಿನ ಹಾವಿನಾಳ ಗ್ರಾಮದ ಸಕಿಪ್ರಾ ಶಾಲೆಯ ಮುಖ್ಯಗುರು ಭೀಮಣ್ಣ ಹುದ್ದಾರ್‌ಗೆ ಬೆಂಗಳೂರಿನ ಜಾನಪದ ಸಾಂಸ್ಕೃತಿಕ ಸಂಘವು 2013-14ನೇ ಸಾಲಿನ ಕರ್ನಾಟಕ ಜಾನಪದ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ಜಾನಪದ ಆಕಾಡೆಮಿ ಅಧ್ಯಕ್ಷ ಬಾನಂದೂರು ಕೆಂಪಯ್ಯ ಹುದ್ದಾರ್‌ಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಅಕ್ರಮ ಮದ್ಯ ವಶ
ಸುರಪುರ: ಇಲ್ಲಿಯ ಹಳೆ ಬಸ್ ನಿಲ್ದಾಣ ಹತ್ತಿರದ ಚಹಾ ಹೋಟೆಲ್‌ನಲ್ಲಿ ಮಂಗಳವಾರ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಸುಮಾರು 3120 ರುಪಾಯಿ ಮೊತ್ತದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಗೋವಿಂದಸ್ವಾಮಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಬಕಾರಿ ಡಿಸಿ ಎಸ್.ಕೆ. ಕುಮಾರ ಆದೇಶದ ಮೇರೆಗೆ ಇಲ್ಲಿಯ ಅಬಕಾರಿ ನಿರೀಕ್ಷರಾದ ಭಾರತಿ ಅವರ ನೇತೃತ್ವದಲ್ಲಿ ಈ ದಾಳಿ ನಡೆಯಿತು. ಅಬಕಾರಿ ಉಪ ನಿರೀಕ್ಷಕ ನೂರುಲ್ಲಾಖಾನ್, ರುಕ್ಕೆಪ್ಪ ನಾಟೇಕರ್, ಅಮರಪ್ಪ, ಲಕ್ಷ್ಮಣ, ಗೋಪಾಲ ಇದ್ದರು.
ರು. 2.76 ಲಕ್ಷ ವಶ
ಗುರುಮಠಕಲ್: ಪಟ್ಟಣದಿಂದ ಸೇಡಂ ತಾಲೂಕಿನ ಕಡೆಗೆ ಬೈಕ್‌ನಲ್ಲಿ ರು. 2.76 ಲಕ್ಷ ನಗದು ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಗುರುಮಠಕಲ್ ಪಟ್ಟಣದ ಹೊರವಲಯದಲ್ಲಿ ನೀತಿ ಸಂಹಿತೆ ಉಲ್ಲಂಘಟನೆ ನಿಯಂತ್ರಣ ತಂಡದ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ನಗದನ್ನು ವಶಪಡಿಸಿಕೊಂಡಿದ್ದಾರೆ. ಚಂದ್ರಶೇಖರ ವೀರಣ್ಣ ಉಪ್ಪಿನ್ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಕಡಲೆ ಹಾಗೂ ತೊಗರಿ ಮಾರಿದ ಹಣವೆಂದು ಈತ ತಿಳಿಸಿದ್ದಾನೆ. ಆದರೆ ಯಾವುದೇ ದಾಖಲೆಗಳು ಇಲ್ಲದ್ದರಿಂದ ಆಕ್ರಮ ಹಣ ಸಾಗಾಟ ಆರೋಪದಡಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಗುರುಮಠಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.