ಮತದಾನಕ್ಕೆ ಸಿದ್ಧತೆ
ಸುರಪುರ: ಈ ಬಾರಿಯ ವಿಧಾನಸಭೆ ಚುನಾವಣೆಯನ್ನು ಕ್ಷೇತ್ರದ ಮತದಾರರು ಮುಕ್ತವಾಗಿ ಮತ್ತು ಶಾಂತಿಯುತವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಬಸವರಾಜ ಸುಣ್ಣದ ತಿಳಿಸಿದರು.
ಇಲ್ಲಿಯ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 268 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 1,09,583 ಪುರಷರು ಮತ್ತು 1,06,211 ಮಹಿಳಾ ಮತದಾರರು ಸೇರಿದಂತೆ ಒಟ್ಟು 2,15,794 ಮತದಾರ ತಮ್ಮ ಮತವನ್ನು ಚಲಾಯಿಸುವ ಹಕ್ಕು ಪಡೆದಿದ್ದಾರೆ ಎಂದು ಚುನಾವಣಾಧಿಕಾರಿ ಬಸವರಾಜ ಸುಣ್ಣದ ಹೇಳಿದರು. ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಇನ್ನೆರಡು ದಿನ ಬಾಕಿ ಇರುವುದರಿಂದ ಮತದಾರರ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಏ.11ರಂದು ಮತದಾರ ಸಂಖ್ಯೆಯ ಸ್ಪಷ್ಟ ಚಿತ್ರಣ ಸಿಗಲಿದೆ ಎಂದರು.
ಚುನಾವಣೆಗೆ 71 ರೂಟ್ಗಳನ್ನು ರಚಿಸಲಾಗಿದೆ. ನಾರಾಯಣಪುರ-2, ತಿಂಥಣಿ-1, ಮತ್ತು ಮಾಳನೂರು-1 ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. 6-ಎಂಸಿಸಿ ತಂಡ, 6-ವಿಶೇಷ ಜಾಗೃತ ದಳ, ಎಸ್ಎಸ್ಟಿ-1 ತಂಡ ರಚಿಸಲಾಗಿದೆ. 126-ಅತಿಸೂಕ್ಷ್ಮ, 79-ಸೂಕ್ಷ್ಮ, 60-ಸಾಮಾನ್ಯ ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದು ಸುಣ್ಣದ ತಿಳಿಸಿದರು. ಕ್ಷೇತ್ರದ ಯಾವುದೇ ಭಾಗದಲ್ಲಾದರೂ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ನಾಗರಿಕರು ತಕ್ಷಣವೇ ಮಾಹಿತಿ ನೀಡಬೇಕು ಎಂದು ಕೋರಿದರು.