ಮತ್ತಷ್ಟು ಅಭಿವೃದ್ಧಿಗೆ ಆಯ್ಕೆ ಮಾಡಿ
ಹುಣಸಗಿ: ತಾಲೂಕಿನಲ್ಲಿ ಈಗಾಗಲೇ ಸಾವಿರಾರು ಕೋಟಿ ರು. ಕಾಮಗಾರಿ ಕೈಗೊಂಡು ಅಭಿವೃದ್ಧಿ ಮಾಡಿದ್ದೇನೆ. ಮತ್ತಷ್ಟು ಅಭಿವೃದ್ಧಿಗಾಗಿ ಈ ಬಾರಿ ತಮ್ಮನ್ನು ಬೆಂಬಲಿಸಿ ಆಯ್ಕೆ ಮಾಡಿ ಎಂದು ಜೆಡಿಎಸ್ ಅಭ್ಯರ್ಥಿ ರಾಜುಗೌಡ ಮನವಿ ಮಾಡಿದರು.
ಹುಣಸಗಿ ಪಟ್ಟಣದಲ್ಲಿ ಮಂಗಳವಾರ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಈ ಬಾರಿ ಕುಮಾರಸ್ವಾಮಿ ಮತ್ತೆ ಸಿಎಂ ಆಗಲಿದ್ದಾರೆ. ಆದ್ದರಿಂದ ಜೆಡಿಎಸ್ ಬಲಿಷ್ಠಗೊಳಿಸೋಣ. ಕುಮಾರಸ್ವಾಮಿ ಮುಖ್ಯಮಂತ್ರಿಯಿದ್ದಾಗ ಸುರಪುರ ತಾಲೂಕಿಗೆ ಸುಮಾರು ರು. 100 ಕೋಟಿಗೂ ಅಧಿಕ ಅನುದಾನ ತಂದಿದ್ದೇನೆ. ವಿವಿಧ ಕಾಮಗಾರಿಗಳ ಉದ್ಘಾಟನೆ ಮಾಡಿದ್ದು, ಕ್ಷೇತ್ರದ ಜನ ಇನ್ನೂ ಮರೆತಿಲ್ಲ. ಸುರಪುರ ಕ್ಷೇತ್ರದ ಅಭಿವೃದ್ಧಿಗಾಗಿ ಜೆಡಿಎಸ್ ಸೇರಿದ್ದು, ಮತ್ತೆ ಅಧಿಕಾರಕ್ಕೆ ಬರಲು ಎಲ್ಲರ ಆಶೀರ್ವಾದ ಮುಖ್ಯ ಎಂದರು. ತಾಲೂಕು ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ ಮಾತನಾಡಿ, ಕುಮಾರಸ್ವಾಮಿ ರಾಜ್ಯದಲ್ಲಿ ಅವಧಿಗೆ ಮುಖ್ಯಮಂತ್ರಿಗಳಾದರೂ, ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ನಾವೆಲ್ಲರೂ ಒಗ್ಗಟ್ಟಿನಿಂದ ಇನ್ನೊಮ್ಮೆ ಜೆಡಿಎಸ್ನು ಅಧಿಕಾರಕ್ಕೆ ತಂದು ಅಭಿವೃದ್ಧಿಯ ಕೆಲಸಗಳಿಗೆ ನೆರವಾಗೋಣ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ನಾಗಣ್ಣ ದಂಡಿನ್, ಬಸವರಾಜಸ್ವಾಮಿ ಸ್ಥಾವರಮಠ, ಎಚ್.ಸಿ. ಪಾಟೀಲ್, ವಿರೇಶ ಚಿಂಚೋಳಿ, ತಿಪ್ಪಣ್ಣಾ ಚಂದಾ, ಸಂಗನಗೌಡ ವಜ್ಜಲ್, ಬಸಣ್ಣ ದೊರಿ, ಚಂದ್ರಶೇಖರ ದಂಡಿನ್, ಸೋಮಶೇಖರ ಸ್ಥಾವರಮಠ, ಮುರಿಗೆಣ್ಣ ದೇಸಾಯಿ ಅನೇಕರು ಇದ್ದರು.