ಸಮಯ ಸದುಪಯೋಗ ಮಾಡಿಕೊಳ್ಳಿ
ಯಾದಗಿರಿ: ವಿದ್ಯಾರ್ಥಿ ಜೀವನದಲ್ಲಿ ಸಮಯ ಬಹಳ ಮೌಲ್ಯ ಹೊಂದಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಅದನ್ನು ಸಾಧನೆಗಾಗಿ ಬಳಸಿಕೊಳ್ಳಬೇಕು ಎಂದು ಗುರುಮಠಕಲ್ ಖಾಸಾಮಠದ ಶಾಂತವೀರ ಸ್ವಾಮೀಜಿ ಕರೆ ನೀಡಿದರು.
ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಪ್ರಯತ್ನಶೀಲರಾಗಬೇಕು. ಶ್ರದ್ಧೆ, ನಿಷ್ಠೆಯಿಂದ ವ್ಯಾಸಂಗವನ್ನು ಮಾಡಬೇಕು. ಯಾವುದೇ ಕ್ಷಣಿಕ ಆಸೆ, ಆಮಿಷಗಳಿಗೆ ಈಡಾಗದೇ ತಾವು ಜೀವನದಲ್ಲಿಟ್ಟುಕೊಂಡ ಗುರಿಯನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.
ಅಮೂಲ್ಯ: ಪ್ರಾಂಶುಪಾಲ ಡಾ. ಸುಭಾಶ್ಚಂದ್ರ ಕೌಲಗಿ ಮಾತನಾಡಿ, ವಿದ್ಯಾರ್ಥಿ ಜೀವನ ತುಂಬಾ ಅಮೂಲ್ಯವಾಗಿದೆ.
ಈ ಸಮಯದಲ್ಲಿ ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಜೀವನದಲ್ಲಿ ಕಂಡ ಕನಸನ್ನು ನನಸು ಮಾಡಲು ನಿರಂತರವಾಗಿ ಶ್ರಮಿಸಬೇಕು. ಪ್ರತಿಯೊಬ್ಬರ ಜೀವನದಲ್ಲಿ ಕನಸು ಮತ್ತು ನಿರ್ಧಾರ ಅವರದ್ದಾಗಿರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಡಾಕ್ಟರೇಟ್ ಪದವಿ ಪಡೆದ ಡಾ. ಗುರುಲಿಂಗಯ್ಯ ಆರ್. ಚಿಕ್ಕಮಠ, ಡಾ. ನುಜಹತ್ ಪರ್ವೀನ್, ಡಾ.ಪ್ರಮೀಳಾ, ಡಾ. ಸಿದ್ದರಾಜ ರೆಡ್ಡಿ, ಡಾ.ಡಿ. ಸುರೇಶ ಅವರನ್ನು ಸನ್ಮಾನಿಸಲಾಯಿತು.
ಪುರಸ್ಕಾರ: ಪ್ರತಿಭಾನ್ವಿತ ವಿದ್ಯಾರ್ಥಿನಿ ಜ್ಯೋತಿ ಎಚ್ ಸಿ.ವಿ. ರಾಮನ್ ಹಾಗೂ ಸಂಚಿ ಹೊನ್ನಮ್ಮಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಉಳಿದಂತೆ 14 ವಿದ್ಯಾರ್ಥಿಗಳಿಗೆ ಇದೇ ಮೊದಲ ಬಾರಿಗೆ ತಲಾ ರು. 5 ಸಾವಿರ ದಂತೆ ಸರ್.ಸಿ.ವಿ. ರಾಮನ್ ನಗದು ಪುರಸ್ಕಾರ ನಾಡಲಾಯಿತು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಮಹಾದೇವಪ್ಪ ಗಣಪುರ, ನಾಗರಾಜ ಬೀರನೂರ, ಮಲ್ಹಾರೆಡ್ಡಿ ಪಾಟೀಲ್, ಡಾ. ಜಗನ್ನಾಥ ಪಟ್ಟಣಕರ್, ಹಣಮಂತ ದಾಸನ್ ಇತರರಿದ್ದರು. ಪದ್ಮಶ್ರೀ ಪ್ರಾರ್ಥಿಸಿದರು. ಆಶ್ವಿನಿ ಮತ್ತು ಮಾರಿಯಾ ನಿರೂಪಿಸಿದರು. ಚಂದ್ರಿಕಾ ವಂದಿಸಿದರು.
ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ ಶಿವಶರಣಗೆ ರಾಜ್ಯಶಾಸ್ತ್ರ ವಿಭಾಗದ ಹಣಮಂತ ದಾಸನ್ ಅವರು ವೈಯಕ್ತಿಕವಾಗಿ ಸನ್ಮಾನಿಸಿದರು. ಪ್ರಲ್ಹಾದ ಜೋಶಿ ಅವರ ಸಂಗೀತ ಕಾರ್ಯಕ್ರಮ ಸಭಿಕರ ಮನಸೂರೆಗೊಂಡಿತು.