ಅಗ್ನಿ ಸಮಾಧಿ: ಸಿಬಿಐ ತನಿಖೆಗೆ ಕರವೇ ಆಗ್ರಹ
ಗುಲ್ಬರ್ಗ: ಬೀದರ್ ಜಿಲ್ಲೆಯ ಚೌಳಿ ಮಠದ ಮೂವರು ಸಾಧಕರು ಹಾಗೂ ಹಿರಿಯ ಶ್ರೀಗಳಾದ ಗಣೇಶ್ವರ ಅವಧೂತರ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ- ತಾಲೂಕು ಘಟಕಗಳಿಂದ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಬರೆದ ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಮನುಕುಲದ ಊಹೆಯನ್ನೇ ಮೀರಿ ಸೋಮವಾರ ಮೂವರು ಕಿರಿಯ ಸ್ವಾಮೀಜಿಗಳು ಸ್ವ-ಇಚ್ಛೆಯಿಂದ ಆತ್ಮಾಹುತಿ ಮಾಡಿಕೊಂಡಿರುವುದು ನಾಡನ್ನು ದಂಗುಬಡಿಸಿದೆ. ಅಲ್ಲದೆ, ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ವಿಷಾದಿಸಿದೆ.
ಹಲವು ಅನುಮಾನ: ಫೆ.28ರಂದು ಚೌಳಿಮಠದ ಹಿರಿಯ ಶ್ರೀಗಳಾದ ಗಣೇಶ್ವರ ಅವಧೂತ ಸ್ವಾಮೀಜಿ ನಿಗೂಢ ಸಾವಿಗೆ ಶರಣಾಗಿರುವುದು ಭಕ್ತರ ಮನದಲ್ಲಿ ಇನ್ನೂ ಹಸಿರಾಗಿರುವಾಗಲೇ ಮತ್ತೊಂದು ದುರ್ಘಟನೆ ನಡೆದಿರುವುದು ದುರದೃಷ್ಟಕರ. ಹಿರಿಯ ಶ್ರೀಗಳ ಸಾವಿನಿಂದ ಮನನೊಂದ ವೀರಾರೆಡ್ಡಿ ಸ್ವಾಮೀಜಿ, ಜಗನ್ನಾಥ ಸ್ವಾಮಿ ಹಾಗೂ ಪ್ರಣವ್ ಸ್ವಾಮಿ ಏ.8ರಂದು ಬೆಳಗಿನ ಜಾವ 5ರ ಸುಮಾರಿಗೆ ಚಿತೆಯಲ್ಲಿ ಆತ್ಮಾಹುತಿ ಮಾಡಿಕೊಂಡಿರುವುದು ಹಲವು ಅನಮಾನಗಳಿಗೆ ಎಡೆಮಾಡಿದೆ.
ಹಿರಿಯ ಶ್ರೀಗಳ ಸಾವು ಅನೇಕ ಅನುಮಾನಗಳಿಗೆ ಕಾರಣವಾಗಿತ್ತು. ಬೆದರಿಕೆಯ ಕರೆಗಳು ಬರುತ್ತಿದ್ದವು ಎಂದು ಹೇಳಲಾಗಿತ್ತು. ತನಿಖೆಗೆ ಆದೇಶಿಸಿದ್ದರೂ ರಹಸ್ಯ ಭೇದಿಸುವಲ್ಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ. ಸಾವಿಗೆ ಶರಣಾಗಿರುವ ಕಿರಿಯ ಶ್ರೀಗಳಿಗೆ ಕೂಡ ಬೆದರಿಕೆಯ ಕರೆಗಳು ಬರುತ್ತಿದ್ದವು ಎಂದು ಹೇಳಲಾಗುತ್ತಿದೆ. ಆದ್ದರಿಂದ ಹಿರಿಯ ಮತ್ತು ಕಿರಿಯ ಸ್ವಾಮಿಗಳ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಿ ಶ್ರೀಮಠಕ್ಕೆ ಹಾಗೂ ಭಕ್ತರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ ಬಿರನೂರ, ಸಂಪತ್ ಬಿಜಾಪುರೆ, ಗೋಪಾಲ ನಾಟೀಕರ್, ಶಿವಶಂಕರ, ಸಂತೋಷ ಚೌಧರಿ, ಶರಣು ಹೊಸಮನಿ, ಶಂಭುಲಿಂಗ ಶಾಬಾದಕರ್, ಅಭಿಷೇಕ, ನಿಜಲಿಂಗ ಮಠಪತಿ ಇನ್ನಿತರರು ಇದ್ದರು.