ಉತ್ತಮ ಅಭಿವೃದ್ಧಿ ಮಾಡಿ ತೋರಿಸುವೆ
ಕೆಂಬಾವಿ: ಶಹಾಪುರ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಯಿಂದ ವಂಚಿತವಾಗಿದೆ. ಈ ಬಾರಿ ಮತದಾರ ಬಿಎಸ್ಸಾರ್ ಬೆಂಬಲಿಸಿ ತಮ್ಮನ್ನು ಆಯ್ಕೆ ಮಾಡಿದರೆ, ಹಿಂದೆಂದೂ ಆಗದ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತೋರಿಸುತ್ತೇನೆ ಎಂದು ಪಕ್ಷದ ಅಭ್ಯರ್ಥಿ ಶಂಕ್ರಣ್ಣ ವಣಿಕ್ಯಾಳ ಹೇಳಿದರು.
ಅಲ್ಪಸಂಖ್ಯಾತರ ಏಳ್ಗೆ: ಕೆಂಭಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರನ್ನು ಬಿಎಸ್ಸಾರ್ ಕಾಂಗ್ರೆಸ್ಗೆ ಸೇರ್ಪಡೆ ಮಾಡಿಕೊಂಡು ಅವರು ಮಾತನಾಡಿದರು.
ನಾನು ಯಾವುದೇ ಜಾತಿ ರಾಜಕೀಯ ಮಾಡುವ ವ್ಯಕ್ತಿಯಲ್ಲ. ನನ್ನ ರಾಜಕೀಯ ಜೀವನದುದ್ದುಕ್ಕೂ ಹಿಂದುಳಿದ ವರ್ಗ, ದೀನದಲಿತರ, ಶೋಷಿತರ, ಅಲ್ಪಸಂಖ್ಯಾತರ ಏಳ್ಗೆಗಾಗಿ ಶ್ರಮಿಸಿದ್ದೇನೆ.
ಅವರ ಮತಗಳನ್ನೇ ಪಡೆದು ನಾನು ರಾಜಕೀಯ ಪ್ರವೇಶ ಮಾಡಿದ ವ್ಯಕ್ತಿ. ಹಿಂದೆ ನನ್ನನ್ನು 3 ಬಾರಿ ಜಿಲ್ಲಾ ಪಂಚಾಯಿತಿಗೆ ಆರಿಸಿ ಕಳಿಸಿದ ಕೀರ್ತಿ ಕೆಂಭಾವಿ ಭಾಗದ ಮತದಾದರರಿಗೆ ಸಲ್ಲುತ್ತದೆ.
ಕೆಲಸ ಶಾಶ್ವತ: ಯಾವುದೇ ಭ್ರಷ್ಟಾಚಾರ, ಅವ್ಯವಹಾರಗಳನ್ನು ನಡೆಸಿದ ವ್ಯಕ್ತಿ ನಾನಲ್ಲ. ನನಗೆ ಇದ್ದ ಅಧಿಕಾರದಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದೇನೆ ಎಂಬ ಹೆಮ್ಮೆಯಿದೆ.
ಅಧಿಕಾರ ಶಾಶ್ವತವಲ್ಲ. ಆದರೆ ಅಧಿಕಾರವಿದ್ದಾಗ ಮಾಡಿದ ಕೆಲಸ ಶಾಶ್ವತ ಎಂಬ ತತ್ವವನ್ನು ನಾನು ಪಾಲಿಸುತ್ತಾ ಬಂದಿದ್ದೇನೆ.
ಚುನಾವಣೆಯಲ್ಲಿ ಹಿಂದುಳಿದ ವರ್ಗ, ಬಡವರ, ಶ್ರಮಿಕರ, ರೈತರ, ದೀನದಲಿತರ, ಶೋಷಿತರ, ಅಲ್ಪಸಂಖ್ಯಾತರ ಧ್ವನಿಯಾಗಲು ಸ್ಥಾಪಿತವಾದ ಬಿಎಸ್ಸಾರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿದ್ದೇನೆ.
ಮತದಾರ ಪ್ರಭುಗಳು ನನಗೆ ಆಶೀರ್ವಾದ ಮಾಡಿದಲ್ಲಿ ಶಹಾಪುರ ಮತಕ್ಷೇತ್ರವನ್ನು ಮಾದರಿಯನ್ನಾಗಿ ಮಾಡಿ ತೋರಿಸುತ್ತೇನೆ ಎಂದು ಭರವಸೆ ನೀಡಿದರು.
ಕೆಂಭಾವಿ ಗ್ರಾಮದ ಸೂಗಪ್ಪ ನಗನೂರು, ಆನಂದ ಸೀನಪ್ಪಮನಿ, ವರ್ಮಾ ಸೀನಪ್ಪಮನಿ, ಬಸವರಾಜ್ ಕೆಂಭಾವಿ, ಶರಣಪ್ಪ, ನೆಹೆರು ಕೆಂಭಾವಿ, ಪರಮಾನಂದ ಕನ್ನಳ್ಳಿ, ಮಾಳಪ್ಪ ಸಿನಪ್ಪಮನಿ, ಮಲ್ಲಪ್ಪ ಕಟ್ಟಿಮನಿ, ಮಾಹಾಂತೇಷ ಕಟ್ಟಿಮನಿ, ಜುಮ್ಮಪ್ಪ ಕೆಂಭಾವಿ, ಲಾಲು, ಶಿವಪ್ಪ ಬಳವಾಟ, ರಫೀಕ್ ವಡಿಕೇರಿ, ಬಾಬು ಅರಳಗುಂಡಿಗಿ, ಮಹಾಂತೇಶ ಅರಳಗುಂಡಗಿ, ಚನ್ನಯ್ಯ ಗಣಾಚಾರಿ ಇತರರು ಬಿಎಸ್ಸಾರ್ ಸೇರ್ಪಡೆಯಾದರು.
ಪಕ್ಷದ ಮುಖಂಡರಾದ ಅನಿಲರಾಜ್ ತುಂಬಗಿ, ಗುರುಲಿಂಗಯ್ಯ, ಮುರ್ತುಜಾ ಆಂದೇಲಿ, ಮಜಕುರುದ್ದೀನ್ ಖಾಜಿ ಇತತರ ಇದ್ದರು.