ಚುನಾವಣೆ ಖರ್ಚಿನ ಮೇಲೆ ನಿಗಾ ಇಡಿ
ಯಾದಗಿರಿ: ವಿಧಾನಸಭೆ ಚುನಾವಣೆ ಮುಕ್ತ, ಪಾರದರ್ಶಕ ಹಾಗೂ ಶಾಂತಿಯುತವಾಗಿ ನಡೆಯಲು ಅನುಕೂಲವಾಗುವಂತೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಹಾಗೂ ಪಕ್ಷಗಳ ವೆಚ್ಚದ ಮೇಲೆ ನಿಗಾ ಇಡುವಂತೆ ಚುನಾವಣಾ ವೆಚ್ಚ ವೀಕ್ಷಕರಾಗಿ ಆಗಮಿಸಿರುವ ಅಮಿತ್ ಬೋಬಡೆ ಸೂಚಿಸಿದರು
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ವಿವಿಧ ತಂಡಗಳ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಯಾದಗಿರಿ ಹಾಗೂ ಗುರುಮಠಕಲ್ ಕ್ಷೇತ್ರಗಳ ಚುನಾವಣೆ ಪರಿವೀಕ್ಷಕರಾಗಿ ಆಗಮಿಸಿರುವ ಅವರು ಮಾತನಾಡಿದರು.
ಕ್ರಮದ ವರದಿ: ಯಾದಗಿರಿ ಮತ್ತು ಗುರುಮಠಕಲ್ ಚುನಾವಣಾಧಿಕಾರಿಗಳು, ಸಂಚಾರಿ ಜಾಗೃತ ದಳದ ಅಧಿಕಾರಿಗಳು ಹಾಗೂ ವಿಡಿಯೋ ಸರ್ವೇಲೆನ್ಸ್ ಟೀಮ್ ಮತ್ತು ಸಹಾಯಕ ವೆಚ್ಚ ಪರಿವೀಕ್ಷಣಾ ತಂಡಗಳೊಂದಿಗೆ ಸಭೆ ನಡೆಸಿ ಈವರೆಗೆ ಕೈಗೊಂಡ ಕ್ರಮಗಳ ಬಗ್ಗೆ ವರದಿ ಪಡೆದರು.
ನಿಗಾ ಇಡಿ: ಈ ಸಂದರ್ಭದಲ್ಲಿ ಮಾತನಾಡಿದ ಅಮಿತ ಬೋಬಡೆ ಹಾಗೂ ಸುರಪುರ ಹಾಗೂ ಶಹಾಪುರ ಕ್ಷೇತ್ರದ ವೆಚ್ಚ ಪರಿವೀಕ್ಷಕ ಜೋಸೆಫ್ ಗಂಗತೆ ಅವರು, ಈ ಚುನಾವಣೆಯಲ್ಲಿ ಮತದಾರರಿಗೆ ಅಭ್ಯರ್ಥಿಗಳಿಂದ ಆಮಿಷವೊಡ್ಡುವ ಚಟುವಟಿಕೆಗಳನ್ನು ನಿಯಂತ್ರಿಸಬೇಕಾಗಿದೆ. ಅನೈತಿಕ ಮಾರ್ಗದ ಮೂಲಕ ಮತದಾರರಿಗೆ ಹಣ ಹಂಚುವ ಹಾಗೂ ಮತದಾನಕ್ಕೆ ಆಮಿಷ ಒಡ್ಡುವಂತಹ ಚಟುವಟಿಕೆಗಳ ಮೇಲೆ ನಿಗಾ ಇಡಬೇಕು. ಇಂತಹ ಸೂಕ್ಷ್ಮ ಸ್ಥಳಗಳನ್ನು ಗುರುತಿಸಿ ಚುನಾವಣಾ ಆಯೋಗದ ನಿರ್ದೇಶನದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಹಾಜರಿ ಕಡ್ಡಾಯ: ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್ ಮಾತನಾಡಿ, ಚುನಾವಣಾ ವೆಚ್ಚ ವೀಕ್ಷಕರೊಂದಿಗೆ ನಡೆಯುವ ಸಭೆಯಲ್ಲಿ ಎಲ್ಲ ಫ್ಲೈಯಿಂಗ್ ಸ್ಕ್ವಾಡ್, ವಿಡಿಯೋ ಸರ್ವೇಲೆನ್ಸ್ ಟೀಮ್, ಅಸಿಸ್ಟೆಂಟ್ ಎಕ್ಸಪೆಂಡಿಚರ್ ತಂಡಗಳು ಕಡ್ಡಾಯವಾಗಿ ಹಾಜರಾಗಬೇಕು. ತಮ್ಮ ಜವಾಬ್ದಾರಿಗಳ ಬಗ್ಗೆ, ಈವರೆಗೆ ಕೈಗೊಂಡ ಕ್ರಮಗಳ ಬಗ್ಗೆ, ದಾಖಲೆಗಳ ನಿರ್ವಹಣೆ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು. ನೋಡಲ್ ಅಧಿಕಾರಿಗಳು ಮತ್ತು ಲೈಸನಿಂಗ್ ಅಧಿಕಾರಿಗಳು ಪರಿವೀಕ್ಷಕರಿಗೆ ಎಲ್ಲ ರೀತಿಯ ಸಹಕಾರ ನೀಡಬೇಕು. ತಮ್ಮ ಕರ್ತವ್ಯದಲ್ಲಿ ಯಾವುದೇ ರೀತಿಯ ಲೋಪವೆಸಗಿದ್ದು ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.