ಧಾರ್ಮಿಕ ಕಾರ್ಯಕ್ರಮಗಳಿಂದ ಮಾನಸಿಕ ನೆಮ್ಮದಿ
ಕನ್ನಡಪ್ರಭ ವಾರ್ತೆ, ಜೇವರ್ಗಿ, ಏ.12
ಮಠ- ಮಾನ್ಯಗಳಲ್ಲಿ ನಿರಂತರ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಮಾನಸಿಕ ನೆಮ್ಮದಿ ಪಡೆಯಲು ಸಾಧ್ಯ ಎಂದು ಚಿತ್ತಾಪುರದ ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರು ನುಡಿದರು.
ತಾಲೂಕಿನ ಕೋಳಕೂರ ಗ್ರಾಮದ ಸಿದ್ಧಬಸವೇಶ್ವರರ ಜಾತ್ರಾ ನಿಮಿತ್ತ ಆಯೋಜಿಸಿದ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮಾನವೀಯ ಮೌಲ್ಯಗಳೊಂದಿಗೆ ತೃಪ್ತಿದಾಯಕ ಜೀವನ ನಡೆಸಲು ಸಾಧ್ಯ. ಶರಣರ ಸಂಗವು ಆತ್ಮಕಲ್ಯಾಣಕ್ಕೆ ದಾರಿಯಾಗುವುದು. ಭಕ್ತರ ಉದ್ಧಾರಕ್ಕೆ ಗುರುಕರುಣೆ ಮತ್ತು ಉತ್ತಮ ಸಂಸ್ಕಾರಗಳು ಅಗತ್ಯ. ಸ್ವಾರ್ಥ ರಹಿತ ಮತ್ತು ತ್ಯಾಗ ಸಹಿತ ಕಾಯಕದಿಂದ ಜೀವನದಲ್ಲಿ ಶಾಂತಿ ನೆಲೆಸುತ್ತದೆ ಎಂದರು.
ಸತ್ಯ ಶುದ್ಧ ಕಾಯಕದಿಂದ ಹಣ ಗಳಿಸಿ: ಮನುಷ್ಯ ಆಡಂಬರದ ಬೆನ್ನು ಹತ್ತಿ ಹಾಳಾಗುತ್ತಿದ್ದಾನೆ. ಮನುಷ್ಯನಿಗೆ ಶಾಂತಿ- ನೆಮ್ಮದಿ ಆಧ್ಯಾತ್ಮದಲ್ಲಿ ಮಾತ್ರ ಸಿಗುತ್ತದೆ. ಜಗತ್ತಿನಲ್ಲಿ ಎಲ್ಲರೂ ಹಣ ಗಳಿಸುತ್ತಾರೆ. ಸತ್ಯ ಶುದ್ಧ ಕಾಯಕ ಮಾಡಿ ಹಣ ಗಳಿಸಿದಾಗ ಮಾತ್ರ ಶಾಂತಿ, ನೆಮ್ಮದಿಯಿಂದ ಇರಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಲ್ಬರ್ಗ ರೋಜಾಮಠ ಹಾಗೂ ಕೋಳಕೂರ ಹಿರೇಮಠದ ಕೆಂಚಬಸವ ಶಿವಾಚಾರ್ಯರು ವಹಿಸಿದ್ದರು. ಗದಗಿನ ಪಂಡಿತ ಎಂ.ಕಲ್ಲಿನಾಥ ಶಾಸ್ತ್ರಿಗಳು ಪ್ರವಚನ ದಾಸೋಹಗೈದರು. ಸಿದ್ಧಬಸವೇಶ್ವರ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಶಿವಲಿಂಗಪ್ಪ ನೆಂಗಾ, ಕಾರ್ಯದರ್ಶಿ ಬಸಣ್ಣಗೌಡ ಪೇಠಪಾಟೀಲ್, ಬಸವಂತರಾವ ಪೊಲೀಸ್ ಪಾಟೀಲ್, ಧರ್ಮರಾವ ಕಾಳಶೆಟ್ಟಿ, ಭಾಗಣ್ಣ ಮಡಿವಾಳ, ಸಂಗಯ್ಯಸ್ವಾಮಿ ಹಿರೇಮಠ, ಬಸಣ್ಣ ಸಿಕೇದ್ ಹಾಗೂ ಗ್ರಾಮಸ್ಥರು ಇದ್ದರು.
-
ಶಾಸಕ ನರಿಬೋಳ ಸೇರಿ 27 ಮಂದಿ ಖುಲಾಸೆ
ಜೇವರ್ಗಿ: 2008ರಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಪಟ್ಟಂತೆ ಶಾಸಕ ದೊಡ್ಡಪ್ಪಗೌಡ ಪಾಟೀಲ ಸೇರಿದಂತೆ 27ಜನ ಪ್ರಕರಣದಿಂದ ಖುಲಾಸೆಯಾಗಿದ್ದಾರೆ.
ಘಟನೆ ವಿವರ: ಕಳೆದ 2008ರಲ್ಲಿ ಪಟ್ಟಣದಲ್ಲಿರುವ ಮಹಾಲಕ್ಷ್ಮೀ ದೇವಸ್ಥಾನ ಕಳ್ಳತನವಾಗಿತ್ತು. ಕಳ್ಳತನ ಮಾಡಿದ ಆರೋಪಿಗಳನ್ನು ತ್ವರಿತಗತಿಯಲ್ಲಿ ಬಂಧಿಸುವಂತೆ ಒತ್ತಾಯಿಸಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಸೇರಿದಂತೆ ಇತರರು ಹೆದ್ದಾರಿ ತಡೆ ನಡೆಸಿದ್ದರು. ಹೆದ್ದಾರಿ ತಡೆ ನಡೆಸಿದವರ ವಿರುದ್ಧ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿತ್ತು. ವಾದ, ಪ್ರತಿವಾದ ಆಲಿಸಿದ ನಂತರ ಜೆಎಂಎಫ್‌ಸಿ ನ್ಯಾಯಾಧೀಶರು ಪ್ರಕರಣವನ್ನು ಇತ್ಯರ್ಥಗೊಳಿಸಿ ಖುಲಾಸೆಗೊಳಿಸಲಾಗಿದೆ. ಶಾಸಕ ಸೇರಿದಂತೆ 27ಜನರ ಪರ ನ್ಯಾಯವಾದಿ ಬಸವರಾಜ ಕಂದಗಲ್, ಶಾಂತಗೌಡ ನರಿಬೋಳ, ರಾಜಶೇಖರ ಶಿಲ್ಪಿ ವಾದಿಸಿದರು.