ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಿದ್ಯುತ್ ಸಮಸ್ಯೆ ಶಾಕ್

Lingaraj Badiger
Updated On : 13 Apr 2013, 10:56 am

ಕನ್ನಡಪ್ರಭ ವಾರ್ತೆ, ಚಿಂಚೋಳಿ, ಏ.12
ತಾಲೂಕಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಬಿಸಿಲಿನ ತಾಪದ ಮಧ್ಯೆ ವಿದ್ಯುತ್ ಸಂಪರ್ಕ ಕಡಿತ ಮತ್ತು ಲೊಡ್ ಶೆಡ್ಡಿಂಗ್‌ಗೆ ಜನರ ತೀವ್ರ ವಿರೋಧವಿದ್ದರೂ ಚುನಾವಣೆಯ ಗುಂಗಿನಲ್ಲಿರುವ ವಿವಿಧ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಾಲೂಕಿನ ಅನೇಕ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ಕುಡಿಯುವ ನೀರಿಗೆ ಬರ ಬಂದಾಗಿದೆ. ತಾಲೂಕಿನಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಆದರೆ ವಿದ್ಯುತ್ ಉತ್ಪಾದನೆ ಕಡಿಮೆ ಪ್ರಮಾಣದಲ್ಲಿ ಆಗುತ್ತಿರುವುದರಿಂದ ದಿನೇ ದಿನೇ ವಿದ್ಯುತ್ ಅಭಾವ ಹೆಚ್ಚಾಗಿದೆ ಎಂದು ಇಲ್ಲಿನ ಕೆಪಿಟಿಸಿಎಲ್ ಎಇಇ ಪರಮೇಶ್ವರ ಬಿರಾದಾರ ತಿಳಿಸಿದ್ದಾರೆ.
ಬೇಡಿಕೆ 30 ಮೆವ್ಯಾ, ಸರಬರಾಜು 20 ಮೆವ್ಯಾ: ತಾಲೂಕಿನಲ್ಲಿ ನಿತ್ಯ 28ರಿಂದ 30 ವಿದ್ಯುತ್ ಮೆಗಾವ್ಯಾಟ್ ಬೇಡಿಕೆ ಇದೆ. ಆದರೆ  ದಿನದಲ್ಲಿ 15ರಿಂದ 20 ವಿದ್ಯುತ್ ಮೆಗಾವ್ಯಾಟ್ ಸರಬರಾಜು ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ರಾತ್ರಿ 10ರಿಂದ 15 ವಿದ್ಯುತ್ ಮೆಗ್ಯಾವಾಟ್ ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ತಾಲೂಕಿನ ಕಲ್ಲು ಗಣಿ ಪ್ರದೇಶಗಳಾಗಿರುವ ಮಿರಿಯಾಣ, ಕೃಷ್ಟಾಪುರ, ಗಣಾಪುರ, ಪೋಲಕಪಳ್ಳಿ, ಚಿಂಚೋಳಿ, ಸೋಮಲಿಂಗದಳ್ಳಿ, ಬೈರಂಪಳ್ಳಿ, ಹೂವಿನತೋಟ ಪ್ರದೇಶ, ಕಲ್ಲೂರರೋಡ ಮುಂತಾದ ಕೈಗಾರಿಕಾ ಪ್ರದೇಶಗಳಲ್ಲಿ 19 ವಿದ್ಯುತ್ ಮೆಗ್ಯಾವಾಟ್ ವಿದ್ಯುತ್ ಬೇಡಿಕೆ ಇದೆ. ಆದರೆ ಕಲ್ಲುಗಣಿ ಪ್ರದೇಶಗಳಿಗೆ ಕೇವಲ 3 ರಿಂದ 4 ಮೆವ್ಯಾ ಸರಬರಾಜು ಮಾಡಲಾಗುತ್ತಿದೆ.
ಕಾರ್ಖಾನೆಗಳಿಗೂ ವಿದ್ಯುತ್ ಬರ: ತಾಲೂಕಿನ ಚೆಟ್ಟಿನಾಡ್ ಸಿಮೆಂಟ್ ಕಂಪನಿ ಮತ್ತು ವಿಕಾಟ್ ಸಾಗರ ಸಿಮೆಂಟ್ ಕಂಪನಿಗಳಿಗೆ ವಿದ್ಯುತ್ ನಿಗಮ ಒಪ್ಪಂದ ಪ್ರಕಾಶ 19 ವಿದ್ಯುತ್ ಮೆವ್ಯಾ ಸರಬರಾಜು ಮಾಡಬೇಕಾಗಿತ್ತು. ಆದರೆ ವಿದ್ಯುತ್ ಸಮಸ್ಯೆಯಿಂದಾಗಿ ಕೇವಲ 2, 3 ಮೆಗ್ಯಾವಾಟ್ ಸರಬರಾಜು ಮಾಡಲಾಗುತ್ತಿದೆ.
ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ಅನೇಕ ಜೆರಾಕ್ಸ್ ಅಂಗಡಿ, ಕೂಲ್‌ಡ್ರಿಂಕ್ಸ್, ಕಬ್ಬಿನ ಹಾಲಿನ ಅಂಗಡಿಗಳು ಮತ್ತು ಸಣ್ಣಪುಟ್ಟ ವ್ಯಾಪಾರಿಗಳ ವ್ಯಾಪಾರಕ್ಕೆ ತೊಂದರೆಯಾಗುತ್ತಿದೆ.
ಸಮಸ್ಯೆ ಕೇಳೋರಿಲ್ಲ: ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ಜನರು ತತ್ತರಿಸಿದ್ದರೂ ಈಗ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಗುಂಗಿನಲ್ಲಿರುವ ವಿವಿಧ ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಜನರ ಸಮಸ್ಯೆಗಳಿಗೆ ಯಾರೂ ಸ್ಪಂದಿಸುತ್ತಿಲ್ಲ ಎಂದು ಇಲ್ಲಿನ ಜನರ ಆರೋಪವಾಗಿದೆ.
ಪಟ್ಟಣದಲ್ಲಿ ಬೆ.6 ರಿಂದ 7, 11ರಿಂದ 12 ಮತ್ತು ಮ.2 ರಿಂದ 3 ಗಂಟೆ ಮತ್ತು ಸಂಜೆ 7ರಿಂದ 8 ಗಂಟೆ ದಿನದಲ್ಲಿ ಹಲವು ಭಾರಿ ವಿದ್ಯುತ್ ಸ್ಥಗಿತಗೊಳ್ಳುತ್ತಿರುವುದರಿಂದ ಕುಡಿವ ನೀರಿನ ಸಮಸ್ಯೆ ಮತ್ತು ರಾತ್ರಿ ಸೊಳ್ಳೆಗಳ ಕಾಟ ಮತ್ತು ಧಗೆಯಿಂದ ಜನರು ಕಂಗಾಲಾಗಿದ್ದಾರೆ. ಆದರೆ ರಾಜಕೀಯ ಪಕ್ಷಗಳ ಮುಖಂಡರಿಗೆ ಇವುಗಳ ಪರಿವೇ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement