40 ಲಕ್ಷ ನಗದು, 25 ಕೆಜಿ ಬೆಳ್ಳಿ ವಸ್ತುಗಳ ವಶ
ಕ.ಪ್ರ.ವಾರ್ತೆ ಗುಲ್ಬರ್ಗ ಏ.13
ಗುಲ್ಬರ್ಗ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ 40 ಲಕ್ಷ ನಗದು, 25 ಕೆಜಿ ಬೆಳ್ಳಿ ವಸ್ತುಗಳನ್ನು ಶನಿವಾರ ವಶಪಡಿಸಿಕೊಳ್ಳಲಾಗಿದೆ.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಗುಲ್ಬರ್ಗ ಗ್ರಾಮೀಣ ಠಾಣೆ ಪೊಲೀಸರು ಕೈಗೊಂಡ ಪರಿಶೀಲನೆ ಸಂದರ್ಭದಲ್ಲಿ ಅಪಾರ ಪ್ರಮಾಣದ ನಗದು ಬೆಳ್ಳಿ ಸಾಮಾನುಗಳು ಜಪ್ತಿಯಾಗಿವೆ.
ನಗರದಿಂದ 5 ಕಿಮೀ ಅಂತರದಲ್ಲಿರುವ ತಾಜ ಸುಲ್ತಾನಪುರ ಕ್ರಾಸ್ ಬಳಿ ನಡೆದ ಶೋಧ ಕಾರ್ಯದಲ್ಲಿ ವಾಹನವೊಂದರಲ್ಲಿ ಜೋಡಿಸಿಟ್ಟಿದ್ದ 21 ಲಕ್ಷ, ಹಿರಾಪುರ ಕ್ರಾಸ್ ಬಳಿ ಕಾರಿನಲ್ಲಿ ಇಡಲಾಗಿದ್ದ 17.20 ಲಕ್ಷ ನಗದು ಹಾಗೂ ಕಪನೂರ ಹತ್ತಿರದ ವಾಹನವೊಂದರಲ್ಲಿ ಸಾಗಿಸಲಾಗಿದ್ದ 25 ಕೆಜಿ ಬೆಳ್ಳಿ ಸಾಮಾನುಗಳನ್ನು ಪೊಲೀಸರು ತಮ್ಮ ವಶ ತೆಗೆದುಕೊಂಡಿದ್ದಾರೆ.
ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಗೊಂಡ ನಂತರ ಅಪಾರ ಪ್ರಮಾಣದ ಹಣ ಹಾಗೂ ಬೆಳ್ಳಿ ಸಾಮಾನುಗಳು ಪತ್ತೆಯಾದಂತಹ ಚೊಚ್ಚಲ ಪ್ರಕರಣ ಇದಾಗಿದೆ. ಪ್ರಕರಣ ಕುರಿತು 'ಕನ್ನಡಪ್ರಭ'ದೊಂದಿಗೆ ಮಾತನಾಡದ ಚುನಾವಣಾ ಅಧಿಕಾರಿ ಡಾ. ಕೆ.ಜಿ. ಜಗದೀಶ, ಸದರಿ ಪ್ರಕರಣದಲ್ಲಿ ಜಪ್ತಿ ಮಾಡಿಕೊಂಡಿರುವ ಹಣ ಮತ್ತು ಬೆಳ್ಳಿ ಸಾಮಾನುಗಳ ವಾರಸುದಾರರ ಮಾಹಿತಿ ಇಲ್ಲ. ಆದರೂ ಈ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ಕೈಗೊಳ್ಳಲಾಗುತ್ತಿದೆ. ಪೊಲೀಸರು ಹಣ ಹಾಗೂ ಬೆಳ್ಳಿ ಸಾಮಾನುಗಳ ವಾರಸುದಾರರ ಬಗ್ಗೆ ವಿವಿಧ ಮೂಲಗಳಿಂದ ಮಾಹಿತಿ ಕಲೆ ಹಾಕುವ ಪ್ರಯತ್ನದಲ್ಲಿ ತೊಡಗಿದ್ದಾರೆ ಎಂದು ಹೇಳಿದ್ದಾರೆ.
ಈ ಬೆಳವಣಿಗೆ ಕುರಿತಂತೆ ಗುಲ್ಬರ್ಗ ಗ್ರಾಮೀಣ ಪೊಲೀಸರು ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪ್ರಕಣರ ದಾಖಲಿಸಿಕೊಂಡಿದ್ದಾರೆ.
ಕಾರಿನಲ್ಲಿ ಸಾಗಿಸುತ್ತಿದ್ದ 8.55 ಲಕ್ಷ ವಶ
ಬಿಜಾಪುರ: ತಾಲೂಕಿನ ಕನಮಡಿ ಬಳಿ ಚೆಕ್‌ಪೋಸ್ಟ್‌ನಲ್ಲಿ ವ್ಯಕ್ತಿಯೊಬ್ಬ ಯಾವುದೇ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 8.55 ಲಕ್ಷ ಚುನಾವಣೆ ಸ್ಥಿರ ಕಣ್ಗಾವಲು ಅಧಿಕಾರಿಗಳ ತಂಡ ಜಪ್ತು ಮಾಡಿದೆ. ಶನಿವಾರ ಮಹಾರಾಷ್ಟ್ರ ಕಡೆಯಿಂದ ಕನಮಡಿ ಚೆಕ್‌ಪೋಸ್ಟ್ ಮೂಲಕ ಕಾರಿನಲ್ಲಿ ಆಗಮಿಸಿದ ಸಂತೋಷ ಮಧುಕರ ಎಂಬಾತನ ಬಳಿ 8.55 ಲಕ್ಷ ನಗದು ಪತ್ತೆಯಾಗಿದೆ. ಈ ಹಣವನ್ನು ಡಾ. ರಾಠೋಡ ನೇತೃತ್ವದ ಸ್ಥಿರ ಕಣ್ಗಾವಲು ತಂಡದ ಅಧಿಕಾರಿಗಳು ಜಪ್ತು ಮಾಡಿದ್ದಾರೆ. ಸಂತೋಷನ ವಿರುದ್ಧ ತಿಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.