ಇಂದು ಜಯಂತಿ
ಗುಲ್ಬರ್ಗ: ನಗರದ ಜಿಲ್ಲಾ ಕೆಜೆಪಿ ಕಚೇರಿಯಲ್ಲಿ ಏ.14 ಡಾ. ಅಂಬೇಡ್ಕರರ 122ನೇ ಜಯಂತ್ಯುತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಅಧ್ಯಕ್ಷ ಸುನೀಲ್ ವಲ್ಯಾಪುರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ರಾಜ್ಯ ಯುವ ಘಟಕದ ಅಧ್ಯಕ್ಷ ಜಗದೀಶ ಹಿರೇಮನಿ, ಎಸ್.ಕೆ. ಕಾಂತಾ, ನಾಸೀರ್ ಹುಸೇನ್, ಬಾಬುರಾವ ಚವ್ಹಾಣ, ಸುಭಾಷ ಬಿರಾದಾರ, ತಿಪ್ಪಣ್ಣಪ್ಪ ಕಮಕನೂರ, ಶಿವಾನಂದ ಮಾನಕರ್, ಬಸವರಾಜ ಇಂಗಿನ್, ಕರಸಿದ್ದಪ್ಪಗೌಡ ಪಾಟೀಲ್, ಅಮರನಾಥ ತಡಕಲ್, ವಿಠ್ಠಲ ಪೂಜಾರಿ, ನಟರಾಜ ಕಿಣಗಿಕರ್, ಕುಮಾರ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ
ಗುಲ್ಬರ್ಗ: ನಗರದ ಸಾರ್ವಜನಿಕ ಉದ್ಯಾನವನ ಪಕ್ಕದಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಜಿಲ್ಲಾ ಪರಿಶಿಷ್ಠ, ಜಾತಿ ಪರಿಶಿಷ್ಠ ಪಂಗಡ ಘಟಕದ ವತಿಯಿಂದ ಏ.14ರಂದು ಡಾ. ಅಂಬೇಡ್ಕರ್ ಅವರ 122ನೇ ಜಯಂತಿ ಆಚರಿಸಲಾಗುವುದು. ಶಾಸಕ ಹಾಗೂ ಜಿಲ್ಲಾಧ್ಯಕ್ಷ ಸುಭಾಷ ಗುತ್ತೇದಾರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಿದ್ದಪ್ಪ ಪಾಟೀಲ್ ತಿಳಿಸಿದ್ದಾರೆ. ಸಮಾರಂಭದಲ್ಲಿ ಬಸವರಾಜ ತಡಕಲ್, ಜಿ.ಎಸ್. ರಹಮತ್, ನಾಗೇಂದ್ರಪ್ಪ ಪಾಟೀಲ್, ರೇವಣಸಿದ್ದಪ್ಪ ಬಾಗೋಡಿ, ಶರಣಬಸಪ್ಪ ಪಾಟೀಲ್ ಅಷ್ಟಗಿ, ಉದಯಕುಮಾರ ಜೇವರ್ಗಿ ಸೇರಿದಂತೆ ಪಕ್ಷದ ಮುಖಂಡರು ಪಾಲ್ಗೊಳ್ಳಲಿದ್ದಾರೆ.
ಚಿತ್ತಾಪುರಲ್ಲಿ ಜಯಂತಿ
ಚಿತ್ತಾಪುರ: ಇಲ್ಲಿನ ಕೆಜೆಪಿ ಕಚೇರಿಯಲ್ಲಿ ಏ.14ರಂದು ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಮುಖಂಡರು, ಕಾರ್ಯಕರ್ತರು ಭಾಗವಹಿಸಬೇಕು ಎಂದು ಕೆಜೆಪಿ ತಾಲೂಕು ಅಧ್ಯಕ್ಷ ಗೋಪಾಲ್ ರಾಠೋಡ, ಪಜಾ, ಪಪಂ. ಘಟಕದ ಅಧ್ಯಕ್ಷ ದೀಪಕ ಮನವಿ ಮಾಡಿದ್ದಾರೆ.
ಮದ್ಯ ನಿಷೇಧ
ಗುಲ್ಬರ್ಗ: ಡಾ. ಅಂಬೇಡ್ಕರ್ 122ನೇ ಜಯಂತ್ಯುತ್ಸವ ಪ್ರಯುಕ್ತ ಜಿಲ್ಲಾದ್ಯಂತ ಏ.14ರ ಬೆ. 6ರಿಂದ ಏ.15ರ ಬೆ.6ರ ಗಂಟೆಯವರೆಗೆ ಎಲ್ಲ ತರಹದ ಮದ್ಯ, ಸಾರಾಯಿ, ಸೇಂದಿ, ಸ್ವದೇಶಿ ಮತ್ತು ವಿದೇಶಿ ಮದ್ಯ ಮತ್ತು ಇತರ ಮಾದಕ ವಸ್ತುಗಳ ಮಾರಾಟವನ್ನು ನಿಷೇಧಿಸಿ ಹಾಗೂ ಎಲ್ಲ ಮದ್ಯದಂಗಡಿ ಮುಚ್ಚುವಂತೆ ಜಿಲ್ಲಾ ದಂಡಾಧಿಕಾರಿ ಡಾ. ಕೆ.ಜಿ. ಜಗದೀಶ ಅವರು ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21ರ ಅನ್ವಯ ಈ ಆದೇಶ ಹೊರಡಿಸಿದ್ದಾರೆ.
ನಾಟಕ ಪ್ರದರ್ಶನ
ಗುಲ್ಬರ್ಗ: ಡಾ. ಅಂಬೇಡ್ಕರ್ ಅವರ ಜಯಂತ್ಯುತ್ಸವ ಅಂಗವಾಗಿ ನಗರದ ಕೆಇಬಿ ಹಾಲ್ನಲ್ಲಿ ಧಾರವಾಡ ಶೇಷಗಿರಿ ಕಲಾ ತಂಡದ ಸಹಯೋಗದಲ್ಲಿ ಪ್ರಸ್ತುತಪಡಿಸುವ 'ರಮಾಯಿ' ನಾಟಕವನ್ನು ಏ.14ರಂದು ಬೆಳಗ್ಗೆ 11 ಗಂಟೆಗೆ ಏರ್ಪಡಿಸಲಾಗಿದೆ. ಡಾ. ನಾಗಾಬಾಯಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಗುವಿವಿ ಪ್ರಾಧ್ಯಾಪಕ ಡಾ. ಮೇಲ್ಕೇರಿ ಅಧ್ಯಕ್ಷತೆ ವಹಿಸುವರು.
ಮುಂದೂಡಿಕೆ
ಜೇವರ್ಗಿ: ಏ.15ರಂದು ನಡೆಸಲು ಉದ್ದೇಶಿಸಿದ್ದ ತಾಲೂಕು ಬೇಡ ಜಂಗಮ ಸಮಾವೇಶವನ್ನು ಅನಿವಾರ್ಯ ಕಾರಣಗಳಿಂದ ಮೇ.18ಕ್ಕೆ ಮುಂದೂಡಲಾಗಿದೆ ಎಂದು ಪ್ರವೀಣ ತಿಳಿಸಿದ್ದಾರೆ.