ಚಲ್ತಾ ಹೈ.. ನೀತಿಗೆ ಬಲಿಯಾಯ್ತೆ ಜೇವರ್ಗಿ ಪ್ರಗತಿ?
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.13
ಜೇವರ್ಗಿ ವಿಧಾನಸಭಾ ಕ್ಷೇತ್ರದ ಮಂದಿಗೆ ತಾವು ವಾಸವಾಗಿರೋ ಪಟ್ಟಣ ಅಡಗಿಮನಿ ಆದ್ರ, ಗುಲ್ಬರ್ಗ ಪಡಸಾಲಿ ಇದ್ಹಂಗ ನೋಡ್ರಿ. 30ರಿಂದ 45 ನಿಮಿಷದೊಳ್ಗ ಗುಲ್ಬರ್ಗಕ್ಕೆ ಬಂದು ಹೋಗುವ ಸವಲತ್ತು. ಸಂಪರ್ಕ ಕ್ರಾಂತಿಯ ಸುಫಲ ಜಿಲ್ಲೆಯ ಯಾವ ಭಾಗಕ್ಕೂ ಅಷ್ಟು ಲಭಿಸದೆ ಹೋದ್ರೂ ಇಲ್ಲಿನವರಿಗೆ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗಿದೆ.
ಆದರೆ ಈ ರಸ್ತೆ ವಿಚಾರ ಬದಿಗಿಟ್ಟು ಪ್ರಗತಿ ಅಂಶಗಳ ಚರ್ಚೆಗೆ ಮುಂದಾದಲ್ಲಿ ಜೇವರ್ಗಿ ಜನತೆ ಯಾವುದಕ್ಕೂ ಜನನಾಯಕರ ಸಾಧನೆಗಳನ್ನು ಸುತರಾಂ ಒಪ್ಪೋದಿಲ್ಲ. ಜೇವರ್ಗಿ ಪ್ರಗತಿಗೆ ಅವಕಾಶಗಳು ಸಾಕಷ್ಟಿದ್ದರೂ ಜನನಾಯಕರ ಇಚ್ಛಾಶಕ್ತಿ ಕೊರತೆಯಿಂದ ಪ್ರಗತಿ- ವಿಗತಿಗಳ ನಡುವೆ ಸಿಲುಕಿ ಒದ್ದಾಡುವಂತಾಯ್ತು ಎಂದು ಖೇದ ಪಡುತ್ತಾರೆ.
ಮತದಾರರ ಆಶೀರ್ವಾದ ಪಡೆದವರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶ ಹೊಂದಿದ್ದರೂ ಅವುಗಳೆಲ್ಲವನ್ನು ಜೇವರ್ಗಿಗೇ ಬಳಸುವಲ್ಲಿ ಚಲ್ತೆ ಕಾ ನಾಮ್ ಗಾಡಿ ನೀತಿ ಅನುಸರಿಸಿದ್ದರಿಂದಲೇ ಪ್ರಗತಿ ನಿಧಾನವಾಯ್ತು.
ಮೂಲ ಸೌಕರ್ಯಗಳಲ್ಲಿ ರಸ್ತೆಗಳು ಪರವಾಗಿಲ್ಲ ಎನ್ನಬಹುದಾದರೂ ಕುಡಿವ ನೀರಿನ ವಿಚಾರದಲ್ಲಿ ಮಾತ್ರ ತೀರಾ ಹಿಂದುಳಿದಿದೆ. ಜೀವನದಿ ಭೀಮೆ ತಾಲೂಕಿನ ಬಹುತೇಕ ಪ್ರದೇಶ ವ್ಯಾಪಿಸಿದ್ದರೂ ಇಂದಿಗೂ ಇಲ್ಲಿನ ನೂರಾರು ಹಳ್ಳಿಗಳು ಶಾಶ್ವತ ಕುಡಿವ ನೀರಿನ ಸೌಕರ್ಯವಿಲ್ಲದೆ ಕಂಗೆಟ್ಟಿವೆ.
ನೀರಿನ ಸಮಸ್ಯೆ ವಿಪರೀತ: ಧರಂಸಿಂಗ್ ಹುಟ್ಟೂರು ನೆಲೋಗಿಯೇ ಈ ಮಾತಿಗೆ ಕನ್ನಡಿ. ಈ ಊರ ಪಕ್ಕದಲ್ಲೇ ನದಿಯಿದ್ದರೂ ನೀರನ್ನು ಶುದ್ಧೀಕರಿಸಿ ಊರವರಿಗೆ ಕೊಡುವ ಪ್ರಾಮಾಣಿಕ ಪ್ರಯತ್ನ ಇಂದಿಗೂ ಕೈಗೂಡಿಲ್ಲ.
ಆಂದೋಲಾ, ಕಲ್ಲಹಂಗರ್ಗಾ, ಕೂಡಿದರ್ಗಾ ಹೀಗೆ ನೀರಿಲ್ಲದೆ ಬಾಯಾರಿರುವ ಹಳ್ಳಿಗಳ ಹೆಸರಿರುವ ಯಾದಿ ಉದ್ದಕ್ಕೇ ಬೆಳೆಯುತ್ತಲೇ ಹೋಗುತ್ತದೆ.
“GÅæOÚЫé ಬಂದಾಗೊಮ್ಮೆ ಬರೋ ಮಂದಿಗೆ ಹೇಳಿ ಹೇಳಿ ಸಾಕ್ಯಾಗದ್ರಿ, ಬೇಸಿಗೆ ಬಂದಾಗ ಬೋರವೆಲ್ ಹಾಕಿ ಹೋಗ್ತಾರ, ಅದು ನಡದಷ್ಟು ದಿನ ನೀರ, ಮುಂದ ದೇವರೇ VÚ~...’ ಎಂದು ಜನತೆ ತಾವು ಅನುಭವಿಸುತ್ತಿರುವ ನೀರಿನ ಸಮಸ್ಯೆಯನ್ನು ಈ ರೀತಿ ಹೇಳುತ್ತಾರೆ.
ಇದಕ್ಕೇನು ಕಾರಣ?: 1972ರಿಂದ 2004ರ ವರೆಗಿನ 8 ಚುನಾವಣೆಗಳಲ್ಲಿ ಜೇವರ್ಗಿಯಿಂದ ಗೆದ್ದುಬಂದವರು ಧರಂಸಿಂಗ್. ಸಮಾಜ ಕಲ್ಯಾಣ, ಅಬಕಾರಿ, ನಗರಾಭಿವೃದ್ಧಿ, ಕಂದಾಯ, ಪಿಡಬ್ಲೂಡಿ ಸಚಿವರಾಗಿ, ಕೊನೆಗೆ ಮುಖ್ಯಮಂತ್ರಿಯಾಗಿಯೂ ಗಮನ ಸೆಳೆದವರು.
ಮುಡಬಾಳ ಹಾಗೂ ಇಂಡಿ ಶಾಖಾ ಕಾಲುವೆಗಳ ಮೂಲಕ ಕೃಷ್ಣೆಯ ನೀರನ್ನು ಜೇವರ್ಗಿವರೆಗೂ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. ಆದರೆ ತಾಲೂಕಿನಲ್ಲೇ ಪವಡಿಸಿರುವ ಭೀಮೆಗುಂಟ ಬಾಂದಾರುಗಳ ನಿರ್ಮಾಣ ಸಾಧ್ಯತೆಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವಲ್ಲಿ ಧರಂಸಿಂಗ್ ನಿರೀಕ್ಷಿತ ಸಾಧನೆ ಮಾಡಿದ್ದರೆ ಇಂದು ಜೇವರ್ಗಿ ನಂದನವನ ಆಗುತ್ತಿತ್ತು ಎಂಬ ಜನರ ಅಭಿಮತ ಸುಳ್ಳೇನಲ್ಲ.
ಇಲ್ಲಿ ಮಂಜೂರಾಗಿದ್ದ ತಾಲೂಕು ಕಚೇರಿಗಳ ಸಂಕೀರ್ಣ ಕಟ್ಟಡ ಲೋಕಾರ್ಪಣೆಗೆ ವರ್ಷಗಳೇ ಹಿಡಿದವು. ಆದಾಗ್ಯೂ ಜಿಲ್ಲೆಯ ಇತರೆ ಕ್ಷೇತ್ರಗಳಿಗೆ ಹೋಲಿಕೆ ಮಾಡಿದಲ್ಲಿ ಜೇವರ್ಗಿ ಮೂಲ ಸೌಕರ್ಯ ವಿಚಾರದಲ್ಲಿ ಪರವಾಗಿಲ್ಲ. ಆದರೆ ಇಲ್ಲಿ ಶೌಚಾಲಯಗಳ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಗಳೇ ನಡೆದಿಲ್ಲ. ಅದಕ್ಕೇ ಕೇಂದ್ರ ಸಚಿವ ಜೈರಾಂ ರಮೇಶ ಇದೇ ಕ್ಷೇತ್ರದ ಗಂವ್ಹಾರಕ್ಕೆ ಬಂದು ಶೌಚಾಲಯ ಸಮಸ್ಯೆಗೆ ಪರಿಹಾರ ನೀಡುವ ಯತ್ನ ಮಾಡಿದ್ದು ಇಲ್ಲಿ ಸ್ಮರಣಾರ್ಹ.
ಫುಡ್ಪಾರ್ಕ್ ಯೋಜನೆ ನೆನೆಗುದಿಗೆ: ಧರಂಸಿಂಗ್ ಸಿಎಂ ಆಗಿದ್ದಾಗ ಮಂಜೂರಾಗಿದ್ದ ಜೇವರ್ಗಿ ಫುಡ್ಪಾರ್ಕ್ ಯೋಜನೆ ನೆನೆಗುದಿಗೆ ಬಿದ್ದಿದೆ. ರೈತರಿಂದ ಸ್ವಾಧೀನಪಡಿಸಿಕೊಂಡಿರುವ 125 ಎಕರೆ ಭೂಮಿ ಹಾಗೇ ಉಳಿದಿದೆ. ಜನನಾಯಕರ ನಿರಾಸಕ್ತಿಯೇ ಇದಕ್ಕೆ ಕಾರಣ. ರೈತರು ಉದಾರತನದಿಂದ ತಮ್ಮೂರಿಗೆ ದೊಡ್ಡದೊಂಡು ಉದ್ಯಮ ಬರುತ್ತದೆ ಎಂದು ಭೂಮಿ ನೀಡಿದ್ದರು. ಆದರೆ ಇಂದಿಗೂ ರೈತರ ನಿರೀಕ್ಷೆ ಕೈಗೂಡಿಲ್ಲ.
ಯಡ್ರಾಮಿ ತಾಲೂಕು ಕೇಂದ್ರ: ತಾಲೂಕು ಕೇಂದ್ರವಾಗಬೇಕೆಂಬ ಯಡ್ರಾಮಿ ಜನರ ಬಹುದಿನಗಳ ಬೇಡಿಕೆ ಈಡೇರಿದೆ. ಕೋನಾ ಹಿಪ್ಪರ್ಗಾ ಬಾಂದಾರು ಯೋಜನೆಗೂ ಅನುಮತಿ ದೊರಕಿದೆ. ಆದರೆ ತಾಲೂಕು ಕೇಂದ್ರವಾಗಿ ಯಡ್ರಾಮಿ ಪ್ರಗತಿಗೆ ರಾಜಕೀಯ ಇಚ್ಛಾಶಕ್ತಿ ಅಗತ್ಯ. ಬರುವ ದಿನಗಳಲ್ಲಿ ತಮ್ಮ ತಾಲೂಕು ಕೇಂದ್ರದ ಪ್ರಗತಿಗೆ ಬೆಂಬಲ ನೀಡುವವರಿಗೆ ಮತ ಹಾಕುವುದಾಗಿ ಯಡ್ರಾಮಿ ಜನ ಹೇಳುತ್ತಿದ್ದಾರೆ. ಕೋನಾಹಿಪ್ಪರ್ಗಾ ಬಾಂದಾರಿಗೆ ಅನುಮತಿ ದೊರಕಿದ್ದರೂ ಮಲ್ಲಾಬಾದಿ ಏತ ನೀರಾವರಿಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದು ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ.
ಕಣದ ಹಿನ್ನೋಟ
ಈ ಬಾರಿ ಧರಂ ಪುತ್ರ ಡಾ. ಅಜಯ್ಸಿಂಗ್(ಕಾಂಗ್ರೆಸ್) ಹಾಗೂ ಪ್ರಸಕ್ತ ಶಾಸಕ, ಬಿಜೆಪಿಯ ದೊಡ್ಡಪ್ಪಗೌಡ ನರಿಬೋಳ್ ನಡುವಿನ ಜಿದ್ದಾಜಿದ್ದಿ ಕಣ. ನಡೆದ 12 ಚುನಾವಣೆಗಳಲ್ಲಿ ಕ್ಷೇತ್ರ ಕಂಡದ್ದೇ 4 ಶಾಸಕರನ್ನು. ಏಕೆಂದರೆ- 8 ಬಾರಿ ಧರಂಸಿಂಗ್ ಅವರೇ ಇಲ್ಲಿಂದ ಗೆದ್ದವರು. ಜಾತಿ ರಾಜಕೀಯ ಇಲ್ಲಿ ಕಮ್ಮಿ ಏನಿಲ್ಲ.
ಪ್ರಗತಿ ವಿಚಾರಗಳಿಗಿಂತ ಜಾತಿ ಸಮೀಕರಣ ಯಾರು ತಮ್ಮ ಪರವಾಗಿರುವಂತೆ ನೋಡಿಕೊಳ್ಳುತ್ತಾರೋ ಅವರಿಲ್ಲಿ ಶಾಸಕರಾಗುವುದು ನಿಶ್ಚಿತ ಎಂಬುದನ್ನು ಚುನಾವಣೆಗಳೇ ಸಾಬೀತುಪಡಿಸಿವೆ.
1957- ಶರಣಗೌಡ- ಸ್ವತಂತ್ರ
1962- ನೀಲಕಂಠ ಶರಣಪ್ಪ- ಕಾಂಗ್ರೆಸ್
1967- ಎನ್.ಸಿದ್ರಾಮ ಗೌಡ
1972ರಿಂದ 2004- ಸತತ 8 ಚುನಾವಣೆ- ಧರಂಸಿಂಗ್- ಕಾಂಗ್ರೆಸ್
2008- ದೊಡ್ಡಪ್ಪಗೌಡ ಪಾಟೀಲ್ ನರಿಬೋಳ- ಬಿಜೆಪಿ
-ಶೇಷಮೂರ್ತಿ ಅವಧಾನಿ