ತಾಲೂಕು ಮಟ್ಟದ ಪ್ರಕೃತಿ ವಿಕೋಪ ಪರಿಹಾರ ಸಮಿತಿ ಪುನಾರಚನೆ: ಡಿಸಿ
ಯಾದಗಿರಿ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕು ಮಟ್ಟದ ಪ್ರಕೃತಿ ವಿಕೋಪ ಪರಿಹಾರ ಸಮಿತಿಯನ್ನು ಪುನಾರಚಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಜಿಲ್ಲಾಧಿಕಾರಿ, ಚುನಾವಣಾಧಿಕಾರಿ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
ಈ ಹಿಂದೆ ಸರ್ಕಾರದ ಆದೇಶದಲ್ಲಿ ತಾಲೂಕು ಮಟ್ಟದ ಪ್ರಕೃತಿ ವಿಕೋಪ ಪರಿಹಾರ ಸಮಿತಿಯನ್ನು ಸ್ಥಳಿಯ ಶಾಸಕರ ಅಧ್ಯಕ್ಷತೆಯಲ್ಲಿ ರಚಿಸಿ ಆದೇಶಿಸಲಾಗಿತ್ತು. ಆದರೆ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರವು ಪುನರ್ ಆದೇಶದ ಮೂಲಕ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಪ್ರಕೃತಿ ವಿಕೋಪ ಪರಿಹಾರ ಸಮಿತಿಯನ್ನು ಪುನಾರಚಿಸಿ ಆದೇಶಿಸಿದೆ.
ಅದರಂತೆ ಯಾದಗಿರಿ ಜಿಲ್ಲೆಯ ಬರಪೀಡಿತವೆಂದು ಘೋಷಿಸಿರುವ ಮೂರು ತಾಲೂಕುಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಗರಿಷ್ಠ ಮಟ್ಟದಲ್ಲಿ ಜನರಿಗೆ ಉದ್ಯೋಗ ಒದಗಿಸಲು, ಕುಡಿವ ನೀರು ಸರಬರಾಜು ವ್ಯವಸ್ಥೆ ಮಾಡುವ ಹಾಗೂ ಜಾನುವಾರುಗಳ ಸಂರಕ್ಷಣೆಗಾಗಿ ಮೇವಿನ ಸರಬರಾಜು, ಗೋಶಾಲೆ ತೆರೆಯುವುದು ಇತ್ಯಾದಿ ಬರಪರಿಹಾರ ಕಾರ್ಯಗಳನ್ನು ಸರ್ಕಾರದ ಹಾಲಿ ನಿಯಮಾವಳಿಯನ್ವಯ ತ್ವರಿತವಾಗಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ತಾಲೂಕು ಮಟ್ಟದ ಪ್ರಕೃತಿ ವಿಕೋಪ ಪರಿಹಾರ ಸಮಿತಿಗೆ ಉಪವಿಭಾಗಾಧಿಕಾರಿಗಳು ಅಧ್ಯಕ್ಷರಾಗಿದ್ದು, ತಾಪಂ ಇಒ, ಜಿಪಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸದಸ್ಯರಾಗಿರುತ್ತಾರೆ. ತಹಸೀಲ್ದಾರರು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.
ಸಮಿತಿಯು ಬಿಡುಗಡೆಯಾದ ಅನುದಾನಕ್ಕೆ ತಕ್ಕಂತೆ ಪ್ರಕೃತಿ ವಿಕೋಪ ಪರಿಹಾರ ಕಾಮಗಾರಿಗಳಿಗೆ ರಾಜ್ಯ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿಗಳನ್ವಯ ಯೋಜನೆ ತಯಾರಿಸುವುದು, ಗಂಜಿ ಕೇಂದ್ರ, ಗೋಶಾಲೆ ತೆರೆಯಲು ಜಿಲ್ಲಾ ಮಟ್ಟದ ಸಮಿತಿಗೆ ಶಿಫಾರಸು ಮಾಡಲಿದೆ.
ಪ್ರಕೃತಿ ವಿಕೋಪ ಪರಿಹಾರ ಕಾಮಗಾರಿಗಳ ಅನುಷ್ಠಾನ ಹಾಗೂ ಉಸ್ತುವಾರಿ ಇತ್ಯಾದಿ ಕಾರ್ಯಗಳನ್ನು ನಿರ್ವಹಿಸಲಿದೆ ಎಂದು ಜಿಲ್ಲಾಧಿಕಾರಿಗಳು ಪಕಟಣೆಯಲ್ಲಿ ತಿಳಿಸಿದ್ದಾರೆ.