ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಗೆ ಕ್ರಮ

Vishwanath S
Updated On : 14 Apr 2013, 12:49 pm

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ. 13
ಗುಲ್ಬರ್ಗ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿಗೆ ಬೇಕಾಗುವ ಅಗತ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ರೈತರಿಗೆ ಸಕಾಲದಲ್ಲಿ ಪೂರೈಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಲ್ಲವಿ ಆಕುರಾತಿ ಹೇಳಿದರು.
ಅವರು ಗುಲ್ಬರ್ಗದಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜ ಕುರಿತು ಆಯೋಜಿಸಿದ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮರ್ಪಕ ವ್ಯವಸ್ಥೆ: ರೈತರಿಗೆ ಬೇಕಾಗುವ ಅಗತ್ಯ ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಮೇ 15ರೊಳಗೆ ದಾಸ್ತಾನು ಮಾಡಿಟ್ಟುಕೊಂಡು ಸಮರ್ಪಕ ವಿತರಣೆಗೆ ವ್ಯವಸ್ಥೆ ಮಾಡಬೇಕು. ಅಗತ್ಯ ಬೀಜಗಳ ಕೊರತೆಯುಂಟಾದರೆ ಪರ್ಯಾಯ ವ್ಯವಸ್ಥೆ ಹಾಗೂ ಕೊರತೆಯುಂಟಾಗುವ ಹೆಸರು ಮತ್ತು ಬಿಟಿ ಹತ್ತಿ ಬಿತ್ತನೆ ಬೀಜಗಳನ್ನು ರೈತರಿಂದ ರೈತರಿಗೆ ಪೂರೈಸುವ ವ್ಯವಸ್ಥೆ ಮಾಡಬೇಕು ಎಂದರು.
ರೈತರಿಗೆ ಯಾವುದೇ ರೀತಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕೆಂದು ಕೃಷಿ ಅದಿಕಾರಿಗಳಿಗೆ ಹಾಗೂ ವಿವಿಧ ಬೀಜ ಉತ್ಪಾದನಾ ಮತ್ತು ಸರಬರಾಜು ಸಂಸ್ಥೆಗಳಿಗೆ ಸೂಚಿಸಿದರು. ಜಿಲ್ಲೆಯ ಒಟ್ಟು ಬಿತ್ತನೆ ಕ್ಷೇತ್ರ 10.02 ಲಕ್ಷ ಹೆಕ್ಟೇರ್ ಇದ್ದು, ಇದರಲ್ಲಿ ಮುಂಗಾರು ಹಂಗಾಮಿನ ಕ್ಷೇತ್ರ 5,20,204 ಹೆಕ್ಟೇರ್ ಇರುತ್ತದೆ. ಈ ಪೈಕಿ 4,88,567 ಹೆಕ್ಟೇರ್ ಮಳೆಯಾಶ್ರಿತ ಮತ್ತು 31, 627 ಹೆಕ್ಟೇರ್ ನೀರಾವರಿ ಪ್ರದೇಶವಿದೆ. ಹಿಂಗಾರು ಹಂಗಾಮು ಒಟ್ಟು-4,59,786 ಹೆಕ್ಟೇರ್, ಮಳೆಯಾಶ್ರಿತ-4,30,481 ಹೆಕ್ಟೇರ್, ನೀರಾವರಿ-29,305 ಹೆಕ್ಟೇರ್. ಬೇಸಿಗೆಯಲ್ಲಿ ಒಟ್ಟು-22,000 ಹೆಕ್ಟೇರ್ (ನೀರಾವರಿ).
ರಸಗೊಬ್ಬರ ವಿವರ: ಜಿಲ್ಲೆಗೆ ಬೇಕಾಗುವ ರಸಗೊಬ್ಬರ ವಿವರ ಮೆ. ಟನ್‌ಗಳಲ್ಲಿ:  ಒಟ್ಟು-1,63,697. ಮುಂಗಾರು 1,49,237. ಹಿಂಗಾರು- 14,460. ಬಿತ್ತನೆ ಬೀಜದ ಬೇಡಿಕೆ ಕ್ವಿಂಟಲ್‌ಗಳಲ್ಲಿ ಒಟ್ಟು-84,579. ಮುಂಗಾರು-59,565. ಹಿಂಗಾರು-19,116. ಬೇಸಿಗೆ-5898. ಪ್ರಮಾಣೀಕೃತ ಬೀಜದ ಬೇಡಿಕೆ ಕ್ವಿಂಟಲ್‌ಗಳಲ್ಲಿ ಒಟ್ಟು-33,076. ಮುಂಗಾರು-24,738. ಹಿಂಗಾರು-6372. ಬೇಸಿಗೆ-1966. ಜಿಲ್ಲೆಯಲ್ಲಿ 185 ಸಹಕಾರ ಮತ್ತು 297 ಖಾಸಗಿ ರಸಗೊಬ್ಬರ ಡೀಲರ್ಸ್, 77 ಬೀಜ ಡೀಲರ್ಸ್, 534 ಪೆಸ್ಟಿಸೈಡ್ ಡೀಲರ್‌ಗಳಿದ್ದು, 34 ರೈತ ಸಂಪರ್ಕ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರಮಾಣೀಕೃತ ಬೀಜಗಳನ್ನು ರೈತ ಸಂಪರ್ಕಗಳ ಮೂಲಕ ಹಾಗೂ 10 ಹೆಚ್ಚುವರಿ ಮಾರಾಟ ಕೇಂದ್ರ ಹಾಗೂ 89 ನೋಂದಾಯಿತ ಖಾಸಗಿ ಡೀಲರ್‌ಗಳ ಮೂಲಕ ವಿತರಿಸಲಾಗುವುದು.
ರಸಗೊಬ್ಬರ ವಿವರ: ಮುಂಗಾರು ಹಂಗಾಮಿಗೆ ಬೇಕಾಗುವ ಒಟ್ಟು 1,49,237 ಮೆ.ಟನ್ ರಸಗೊಬ್ಬರದಲ್ಲಿ 73,929 ಮೆ.ಟನ್ ಡಿಎಪಿ, 46,732 ಮೆ.ಟನ್ ಯೂರಿಯಾ, 7805 ಎಂಓಪಿ, 20,771 ಕಾಂಪ್ಲೆಕ್ಸ್ ರಸಗೊಬ್ಬರದ ಬೇಡಿಕೆಯಿದ್ದು, ವಿವಿಧ ರಸಗೊಬ್ಬರ ತಯಾರಿಕಾ ಸಂಸ್ಥೆಗಳ ಮೂಲಕ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.
ಜಿಪಂ ಉಪಕಾರ್ಯದರ್ಶಿ ವಸಂತ ವಿ. ಕುಲಕರ್ಣಿ, ಜಂಟಿ ಕೃಷಿ ನಿರ್ದೇಶಕ ಐ.ಇ. ಬಳತಕರ್, ಕೃಷಿ ಇಲಾಖೆಯ ಅಧಿಕಾರಿಗಳು, ರಸಗೊಬ್ಬರ ಮತ್ತು ಬೀಜೋತ್ಪಾದನೆ ಮಾಡುವ ವಿವಿಧ ಸಂಸ್ಥೆಗಳ ಅಧಿಕಾರಿಗಳು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement