ಮಹಾರುದ್ರಯಾಗ ಮಂಗಲ
ಕನ್ನಡಪ್ರಭ ವಾರ್ತೆ , ಯಾದಗಿರಿ , ಏ.13
ಜಿಲ್ಲೆಯ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿರುವ ಸುಕ್ಷೇತ್ರ ಅಬ್ಬೆತುಮಕೂರು ಸಿದ್ದಸಂಸ್ಥಾನ ಮಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ಡಾ. ಗಂಗಾಧರ ಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಮಹಾರುದ್ರಯಾಗವು ಶನಿವಾರ ಕಾಶಿ ಮಹಾಪಿಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಭಕ್ತಿ ಭಾವದೊಂದಿಗೆ ಮಂಗಲಗೊಂಡಿತು.
ಶ್ರೀಶೈಲದ ಚಂದ್ರಶೇಖರ ಸ್ವಾಮೀಜಿ ಶಿಷ್ಯವೃಂದ, 60ಕ್ಕೂ ಹೆಚ್ಚು ವೈದಿಕರ ತಂಡ ಮಹಾರುದ್ರಯಾಗದಲ್ಲಿ ಪಾಲ್ಗೊಂಡಿದ್ದರು. ಇದಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು. ಮಹಾರುದ್ರಯಾಗದ ಋತ್ವಿಜರು ಗಂಗಾಪೂಜೆ, ಅಖಂಡ ಧರ್ಮ ದೀಪ ಪ್ರಜ್ವಲನಾ, ಗೌರಿ ಗಣಪತಿ ಪೂಜೆ, ರಕ್ಷಾ ಕಂಕಣ ಧಾರಣೆ, ಸಪ್ತ ದೇವತಾ ಪೂಜೆ, ಏಕಾದಶ ರುದ್ರ, ಕಲಶ ಪೂಜೆ, ಮಹಾರುದ್ರಾಭಿಷೇಕ ನೇರವೆರಿಸಿ ಮಹಾ ಮಂಗಳಾರತಿ ಮಾಡಿದರು.
ಕಾಶಿ ಜಗದ್ಗುರುಗಳ ಪಾದಪೂಜೆಯನ್ನು ಬಸವರಾಜ ಮತ್ತಿಮೂಡ ದಂಪತಿ ನೆರವೇರಿಸಿದರು. ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಉಪಾಧ್ಯಕ್ಷ ಲಿಂಗನಗೌಡ ಮಲ್ಹಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಚನ್ನಾರಡ್ಡಿ ಪಾಟೀಲ್ ತುನ್ನೂರು, ರಾಜು ಮಾಳಿಕೇರಿ, ಮಲ್ಲಿನಾಥ ಇಂದೂರ್, ಶರಣಪ್ಪಗೌಡ ಬಬಲಾದಿ, ಶಾಂತರಡ್ಡಿ ವನಕೇರಿ, ಪಂಪಣ್ಣ ಚಿಂತನಳ್ಳಿ, ಸಿದ್ದಪಗೌಡ ಗೋನಾಳ ಸೇರಿದಂತೆ ಸಾವಿರಾರು ಭಕ್ತರು ಇದ್ದರು.
ದಾಸೋಹಕ್ಕೆ ಹರಿದು ಬಂದ ಭಕ್ತ ಸಮೂಹ: ಕಾರ್ಯಕ್ರಮಕ್ಕೆ ಬರುವ ಭಕ್ತರಿಗಾಗಿ ಏರ್ಪಡಿಸಿದ್ದ ದಾಸೋಹಕ್ಕೆ ಭಕ್ತ ಸಮೂಹ ಹರಿದು ಬಂದಿತು. ಮಹಾರುದ್ರಯಾಗ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ ಭಕ್ತರು ಕಾಶಿ ಜಗದ್ಗುರುಗಳ ಆಶೀರ್ವಾದ ಪಡೆದ ನಂತರ ಹತ್ತಿಕುಣಿ, ಬಬಲಾದಿ, ತಂಗಡಗಿ ಹಾಗೂ ಐಕೂರ್ ಗ್ರಾಮಗಳ ಭಕ್ತರು ಏರ್ಪಡಿಸಿದ ದಾಸೋಹ ಮಹಾಮನೆಗಳಲ್ಲಿ ಭಕ್ತರು ಭೋಜನ ಸವಿದರು. ವಿವಿಧ ಬಗೆಯ ಪದಾರ್ಥಗಳು, ರೊಟ್ಟಿ, ಸಿಹಿ ತಿನಿಸು ಇತ್ಯಾದಿ ವ್ಯವಸ್ಥೆ ಕೈಗೊಳ್ಳಲಾಗಿತ್ತು.