ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಶರಣರ ವಚನಗಳಲ್ಲಿ ಮಾರ್ಗದರ್ಶಿ ತತ್ವಗಳಿವೆ'

Vishwanath S
Updated On : 14 Apr 2013, 12:45 pm

ಯಾದಗಿರಿ: ವಚನಗಳು ಬದುಕಿನ ತತ್ವ, ವಿಚಾರಗಳನ್ನು ಸೂಚಿಸುವ ದಾರಿದೀಪಗಳಾಗಿವೆ. ಅವುಗಳಲ್ಲಿ ಬದುಕಿನ ಮಾರ್ಗದರ್ಶಿ ತತ್ವವಿದೆ ಎಂದು ಗುರುಮಠಕಲ್ ಖಾಸಾಮಠದ ಶಾಂತವೀರ ಸ್ವಾಮೀಜಿ ನುಡಿದರು.
 ತಾಲೂಕಿನ ಅರಕೇರಾ ಸಿದ್ದಾರೂಢ ಸ್ವಾಮಿ ಬ್ರಹ್ಮ ವಿದ್ಯಾಶ್ರಮದಲ್ಲಿ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾ, ಶರಣರು ತಮ್ಮ ನಿಜ ಜೀವನದಲ್ಲಿ ನಡೆದ ಘಟನೆಗಳನ್ನು ಚಿತ್ರಿಸಿ ಅವುಗಳಿಗೆ ವಚನರೂಪವನ್ನು ನೀಡಿ, ಮುಂದಿನ ಪೀಳಿಗೆಗೆ ಅದನ್ನು ಧಾರೆಯೆರೆದಿದ್ದಾರೆ. ಈ ಜೀವನವೇ ಒಂದು ಮಹಾಪ್ರಸಂಗ. ನಿರಂತರ ಹರಿಯುವ ಮಹಾನದಿಯನ್ನು ಪರಮಾರ್ಥ ಸಾಧನೆ, ಶಿವಾನುಭವ, ಶಿವಭಕ್ತಿಗೆ ಪೂರಕವಾದ ಕಾಯಕ, ಶಿವನಾಮಸ್ಮರಣೆ, ದಾಸೋಹಗಳಷ್ಟೆ ದಾಟಿಸಬಲ್ಲವು. ಭಗವತ್ಸಂಕಲ್ಪವೋ ಏನೋ, ಭಕ್ತಿ ಮಾರ್ಗ, ಧರ್ಮ, ಜ್ಞಾನಮಾರ್ಗ ತೋರಿಸಿಕೊಟ್ಟ ಶಿವಶರಣರು ಈ ಪುಣ್ಯಭೂಮಿಯಲ್ಲಿ ಜನ್ಮವೆತ್ತಿ ಕಾಯಕದಿಂದ, ದಾಸೋಹಗಳಿಂದ ವಚನಗಳಿಂದ ನಮ್ಮನ್ನು ಉದ್ಧರಿಸಿದ್ದಾರೆ ಎಂದರು.
ಸಮಾಜದಲ್ಲಿ ಸಮಾನತೆ, ಸ್ವಯಂಪೂರ್ಣತೆ, ಶ್ರಮ ಗೌರವ-ಗುಣ ಗೌರವಗಳನ್ನು ಸ್ಥಾಪಿಸಿದಂತೆ ಸಿದ್ಧಾಂತದಲ್ಲಿ ಸಮನ್ವಯವನ್ನು ಸಾಧಿಸಿದವರು ಶರಣರು ಎಂದು ಹೇಳಿದರು.
ಸರ್ವರಿಗೆ ಲೇಸನ್ನೇ ಬಯಸಿ: ಸಿದ್ದಾರೂಢ ಸ್ವಾಮಿ ಬ್ರಹ್ಮವಿದ್ಯಾಶ್ರಮ ಪೀಠಾಧಿಪತಿ ಸಿದ್ದಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಸತ್ಯ ಶುದ್ಧ ಕಾಯಕದಲ್ಲಿ ನಿರತರಾಗಬೇಕು. ಗಳಿಸಿದ್ದರಲ್ಲಿ ಅಗತ್ಯವಿರುವಷ್ಟನ್ನು ಮಾತ್ರ ಪರಿಗ್ರಹಿಸಬೇಕು. ಉಳಿದುದನ್ನು ಗುರು-ಲಿಂಗ-ಜಂಗಮ ಸೇವೆಗೆ, ಸಮಾಜ ಸೇವೆಗೆ ಸಲ್ಲಿಸಿ ಸರ್ವರಿಗೆ ಲೇಸನ್ನೇ ಬಯಸಬೇಕು. ಬಹಳ ದಿನ ಬದುಕುವುದೇ ಭಾಗ್ಯವಲ್ಲ. ಸ್ವಲ್ಪ ದಿನ ಬದುಕಿದರೂ, ಸೈ ಎನಿಸಿಕೊಂಡು ಬದುಕಬೇಕು ಎನ್ನುವುದು ಶರಣರ ತತ್ವವಾಗಿತ್ತು ಎಂದರು.
ಇಲಕಲ್ ಗುರುಕೃಪಾಶ್ರಮದ ಸಿದ್ದಬಸವ ಚನ್ನವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಇದೇ ವೇಳೆ ರಾಜಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ ಡಾ. ಮಾಲಕರಡ್ಡಿ ಅವರಿಗೆ 'ಆರೂಢಶ್ರೀ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ದಿಗ್ಗಾಂವ್ ಪಂಚಲಿಂಗೇಶ್ವರ ಹಿರೇಮಠದ ಸಿದ್ದವೀರ ಶಿವಾಚಾರ್ಯ ಸ್ವಾಮಿ, ರನ್ನ ಬೆಳಗಲಿ ಋಷಿ ಯೋಗಾಶ್ರವುದ ಯೋಗಿರಾಜ ಸದಾಶಿವಗುರೂಜಿ, ಹಜರತ್ ಸೈಯದ್ ಅಬುತುರಾಬ್ ಶಾಹ್ ಖಾದ್ರಿ, ಕೋಡಿಹಳ್ಳಿ ಬಸವ ಭೃಂಗೇಶ್ವರ ಸ್ವಾಮಿ, ಶಿವಾನಂದ ಸ್ವಾಮಿ ಸೇರಿದಂತೆ ವಿವಿಧ ಮಠಾಧೀಶರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement