'ಅಂಬೇಡ್ಕರ್ ಶೋಷಿತರ ಧ್ವನಿ'
ಯಾದಗಿರಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಸಮಾನತೆಯನ್ನು ಬಯಸಿ ಸಮಸ್ತ ಶೋಷಿತ ಜನಾಂಗದ ಧ್ವನಿಯಾಗಿದ್ದರು ಎಂದು ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಸುಭಾಶ್ಚಂದ್ರ ಕೌಲಗಿ ಹೇಳಿದರು. ಭಾನುವಾರ ನಗರದ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಅಸಮಾನತೆ ಸಾಮಾಜಿಕ ಸೌಹಾರ್ದತೆಗೆ ಭಂಗ ತರುತ್ತದೆ. ಜಾತಿ ಮತಗಳ ಜಂಜಾಟವನ್ನು ನೀಗಿ ಮನುಕುಲವೆಲ್ಲ ಒಂದಾಗಿ ಬಾಳಿದಾಗ ಶಾಂತಿ ನೆಮ್ಮದಿ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಡಾ.ಅಂಬೇಡ್ಕರ್ ಅವರ ಆದರ್ಶಗಳು ಅನುಕರಣೀಯ ಎಂದು ಹೇಳಿದರು. ಮಲ್ಲಾರಡ್ಡಿ ಪಾಟೀಲ್, ಹಣಮಂತ ದಾಸನ್, ಚನ್ನಬಸ್ಸಪ್ಪ ಓಡ್ಕರ್, ಪ್ರಹ್ಲಾದ ಜೋಶಿ, ಶರಣಬಸ್ಸಪ್ಪ ರಾಯಕೋಟಿ, ದೇವೀದ್ರಪ್ಪ ಹಳಿಮನಿ, ಡಾ. ಅಡಿವೇಶ, ಡಾ. ನುಜಹತ್ ಪರವೀನ್, ದಾವಲಪ್ಪ, ಡಾ. ಪ್ರಮಿಳಾ, ಮೋನಯ್ಯ, ಮಾಳಪ್ಪ, ಲಕ್ಷ್ಮಣ, ಶ್ರೀನಿವಾಸ್ ರಾಮಾಚಾರ್, ಡಾ ಚಿಕ್ಕಮಠ ಇತರರು ಇದ್ದರು.
ಮತದಾರರ ಭೇಟಿ
ಯಾದಗಿರಿ: ಗುರುಮಠಕಲ್ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಾಲಿನಿ ಲೂಯಿಸ್ ಕೋರಿ ಭಾನುವಾರ ಕ್ಷೇತ್ರದ ಅನೇಕ ಗ್ರಾಮಗಳಿಗೆ ತೆರಳಿ ಮತದಾರರನ್ನು ಭೇಟಿಯಾಗಿ ಬೆಂಬಲ ಕೋರಿದರು.ಎಸ್. ಹೊಸಳ್ಳಿ, ಹೊಸಳ್ಳಿ ತಾಂಡಾ, ಬಂದಳ್ಳಿ, ಕೋಟಗೇರಾ ಇನ್ನಿತರ ಗ್ರಾಮಗಳಿಗೆ ಭೇಟಿ ನೀಡಿದ ಅವರು, ಮತದಾರರ ಸಮಸ್ಯೆಗಳನ್ನು ಆಲಿಸಿದರು. ಬರುವ ಚುನಾವಣೆಯಲ್ಲಿ ಏಕೈಕ ಮಹಿಳಾ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ನನ್ನನು ಬೆಂಬಲಿಸಿ ಗೆಲ್ಲಿಸುವಂತೆ ಮನವಿ ಮಾಡಿದರು. ಇದುವರೆಗೆ ಅಧಿಕಾರ ನಡೆಸಿದ ಶಾಸಕರಿಂದ ಕ್ಷೇತ್ರದ ಗತಿ ಏನಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಮತ್ತೆ ಅದೇ ತಪ್ಪು ಮಾಡಿ ಪಶ್ಚಾತ್ತಾಪಪಡಬೇಡಿ. ಬದಲಾವಣೆ ತಂದು, ಕ್ಷೇತ್ರದ ಅಭಿವೃದ್ಧಿಗಾಗಿ ಒಮ್ಮೆ ನನಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಸೋಮವಾರ ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸುವುದಾಗಿ ಅವರು ತಿಳಿಸಿದರು. ಶಿವಪ್ಪ, ಮಲ್ಲಪ್ಪ, ಅಮಲಪ್ಪ, ದೇವಕಮ್ಮ, ಮರೆಮ್ಮ, ಲೋಕಮ್ಮ ಇದ್ದರು.
ಕಾರ್ಯದರ್ಶಿ ನೇಮಕ
ಸುರಪುರ: ಕಾಂಗ್ರೆಸ್ ಪಕ್ಷದ ವರಿಷ್ಠರ ನಿರ್ದೇಶನದ ಮೇರೆಗೆ ಒಬಿಸಿ ವಿಭಾಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ವಾಗಣಗೇರಿಯ ಅಚ್ಚಪ್ಪ ನೀರಡಗಿಯರನ್ನು ನೇಮಿಸಲಾಗಿದೆ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಾಗೂ ಪಕ್ಷದ ಸ್ಥಳೀಯ ನಾಯಕರ ಸಹಯೋಗದಲ್ಲಿ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ಶ್ರಮಿಸಬೇಕು ಎಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಭಗವಂತರಾಯ ಬಳ್ಳೂಂಡಗಿ ಆದೇಶದಲ್ಲಿ ತಿಳಿಸಿದ್ದಾರೆ.