ಕ್ಷೇತ್ರ ಅಭಿವೃದ್ಧಿ ಮೊದಲ ಕೆಲಸ
ಯಾದಗಿರಿ: ಮತಕ್ಷೇತ್ರದ ಜನತೆ ಈ ಬಾರಿ ಬದಲಾವಣೆ ಬಯಸುತ್ತಿದ್ದಾರೆ. ಆ ಕ್ರಾಂತಿಕಾರಿ ಬದಲಾವಣೆಗೆ ಮುನ್ನುಡಿ ಬರೆಯಲಾಗಿದ್ದು, ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದೇ ತಮ್ಮ ಮೊದಲ ಕೆಲಸ. ಅದಕ್ಕಾಗಿ ಈ ಬಾರಿ ಶ್ರೀರಾಮುಲು ಸ್ಥಾಪಿತ ಬಿಎಸ್ಸಾರ್ ಕಾಂಗ್ರೆಸ್ ಬೆಂಬಲಿಸಿ ಎಂದು ಪಕ್ಷದ ಅಭ್ಯರ್ಥಿ ಮೌಲಾಲಿ ಅನಪುರ ಹೇಳಿದರು.
ವಿವಿಧ ಪಕ್ಷ ತೊರೆದು ಬಿಎಸ್ಸಾರ್ ಸೇರ್ಪಡೆಯಾಗುತ್ತಿರುವ ಮುಖಂಡರು, ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ನೂರಾರು ಬೆಂಬಲಿಗರೊಂದಿಗೆ ನಾಗರಾಜ ಗೌಡ ಮಾನಸಗಲ್, ದೇವಾನಂದ ದಾಸನಕೇರಿ, ಜಾನ್ ಸುಂದರ್, ಅಂಥೋನಿ ಮೊದಲಾದವರನ್ನು ಬರಮಾಡಿಕೊಂಡರು.
ಕಟಿಬದ್ಧ: ಹಿಂದುಳಿದ ವರ್ಗಗಳ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಾ ಬಂದಿದ್ದೇನೆ. ಶಾಸಕನಾಗಿ ಆಯ್ಕೆ ಮಾಡಿದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಕಟಿಬದ್ಧನಾಗಿ ಕೆಲಸ ನಿರ್ವಹಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.
ದುರುಪಯೋಗ: ಶಾಸಕ ಡಾ. ಮಾಲಕರಡ್ಡಿ ಅವರು ಕಳೆದ 20 ವರ್ಷಗಳಿಂದ ಅಧಿಕಾರಕ್ಕಾಗಿ ಜನರ ಭಾವನೆಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಚುನಾವಣೆ ಸಮೀಪಿಸಿದಾಗ ಮಾತ್ರ ಮತಕ್ಷೇತ್ರದತ್ತ ಇವರ ಚಿತ್ತ ಹಾಯುತ್ತದೆ. ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಜನತೆ ಕಾದು ಕುಳಿತಿದ್ದಾರೆ ಎಂದು ಟೀಕಿಸಿದರು. ಇದೇ ವೇಳೆ ಮುದ್ನಾಳ, ಚಟ್ನಳ್ಳಿ, ದೋರನಹಳ್ಳಿ, ಗುರುಸಣಗಿ, ಬಸವಂತಪುರ, ಇಬ್ರಾಹಿಂಪುರ, ತಡಬಿಡಿ, ಯಾದಗಿರಿ ನಗರ ಸೇರಿದಂತೆ ವಿವಿಧೆಡೆಯ ನೂರಾರು ಯುವಕರು ಹಾಗೂ ಮಹಿಳೆಯರು ಬಿಎಸ್ಸಾರ್ ಸೇರ್ಪಡೆಯಾದರು. ಚೆನ್ನಬಸ್ಸು ವನದುರ್ಗ, ಅನ್ಸರುದ್ದೀನ್, ಲಲಿತಾ ಅನಪುರ, ಲಿಂಗಣ್ಣ ಸಾಹು, ಅಶೋಕ ಮುದ್ನಾಳ ಇತರರು ಇದ್ದರು.