ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ತೆನೆ ಹೊತ್ತ ನಮೋಶಿ

Lingaraj Badiger
Updated On : 15 Apr 2013, 11:20 am

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.13
ಎರಡು ದಶಕಕ್ಕೂ ಹೆಚ್ಚುಕಾಲ ಬಿಜೆಪಿಯಲ್ಲಿದ್ದ ಹಿರಿಯ ನಾಯಕ, ಮೇಲ್ಮನೆ ಸದಸ್ಯ ಶಶಿಲ್ ನಮೋಶಿ ಅಸೆಂಬ್ಲಿ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಪಕ್ಷಕ್ಕೆ ಗುಡ್ಬೈ ಹೇಳಿದ್ದಾರೆ. ಇದೀಗ ಜೆಡಿಎಸ್ ಸೇರಲು ಮುಂದಾಗಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಅವರೊಂದಿಗೆ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಿರುವ ನಮೋಶಿ, ಶನಿವಾರ ಬೆಂಗಳೂರಲ್ಲಿ ಈ ಇಬ್ಬರೂ ನಾಯಕರನ್ನು ಖುದ್ದಾಗಿ ಕಂಡು ಸರಳವಾಗಿ ಜೆಡಿಎಸ್ಗೆ ಸೇರ್ಪಡೆಯಾದರು. ಈ ಬೆಳವಣಿಗೆಯ ಬಗ್ಗೆ 'ಕನ್ನಡಪ್ರಭ' ನಮೋಶಿಯವರನ್ನು ಮಾತನಾಡಿಸಿದಾಗ ಅವರೂ ದೃಢೀಕರಿಸಿದ್ದಾರೆ.
ಸ್ಪರ್ಧೆ ಅನಿವಾರ್ಯವಾಯ್ತು: ಬಿಜೆಪಿಯಲ್ಲೇ ಇರಲಿ, ಯಾವುದೇ ಪಕ್ಷದಲ್ಲಿರಲಿ ರಾಜಕೀಯವಾಗಿ ತತ್ವ, ಸಿದ್ಧಾಂತ ನಂಬಿದವರು ನಾವು. ನಮಗೆ ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಸೂಚಿಸಿ ಕೊನೆ ಗಳಿಗೆಯಲ್ಲಿ ಅನ್ಯರಿಗೆ ಅಲ್ಲಿಂದ ಕಣಕ್ಕಿಳಿಸುವ ಬಿಜೆಪಿಯ ನಿರ್ಧಾರ ತಮಗೆ ತೀವ್ರ ನೋವುಂಟು ಮಾಡಿತು ಎಂದು ಹೇಳಿದ್ದಾರೆ.
ನಮಗಾದ ಅನ್ಯಾಯ ಸಹಿಸಿಕೊಂಡು ಮೌನವಾಗಿದ್ದರೆ ತಮ್ಮ ಎದುರಾಳಿಯಾಗಿ ಹೊರಹೊಮ್ಮಿರುವವರು ಅನಾಯಾಸದ ಜಯ ಗಳಿಸುತ್ತಿದ್ದರು. ಸುಲಭದ ಜಯ ಎಂಥವರ ಪಾಲಾಗುತ್ತಿತ್ತು ಎಂಬುದು ಗುಲ್ಬರ್ಗದ ಜನರೆಲ್ಲರಿಗೂ ಗೊತ್ತಿರುವ ಸಂಗತಿ, ಹೀಗಾಗಬಾರದು. ಇಂತಹ ಬೆಳವಣಿಗೆಗೆ ತಾವೇ ಕಾರಣೀಭೂತರಾಗಬಾರದು ಎಂಬ ಕಾರಣಕ್ಕಾಗಿ ತಾವು ಈ ಬಾರಿ ಅಖಾಡದಲ್ಲಿರುತ್ತಿರುವುದಾಗಿ ನಮೋಶಿ ತಿಳಿಸಿದ್ದಾರೆ.
ನ್ಯಾಯಕ್ಕಾಗಿ ಜನರ ಬಳಿ ಹೋಗುವೆ: ನಮೋಶಿ ಈಗಾಗಲೇ ಕಳೆದ 3 ಅವಧಿಯಿಂದಲೂ ಈಶಾನ್ಯ ಶಿಕ್ಷಕ ಮತಕ್ಷೇತ್ರದಿಂದ ಗೆದ್ದು ಮೇಲ್ಮನೆ ಸದಸ್ಯರಾಗಿದ್ದವರು. ಇದೀಗ ಜೆಡಿಎಸ್ ಸೇರಿದ್ದರಿಂದ ಎಂಎಲ್ಸಿ ಸ್ಥಾನಕ್ಕೂ ರಾಜಿನಾಮೆ ಸಲ್ಲಿಸುವೆ. ಪಕ್ಷದಿಂದ ಆಗಿರುವ ನೋವು ಎಂದಿಗೂ ಮಾಯದು. ಅದಕ್ಕಾಗಿಯೇ ಜೆಡಿಎಸ್ ಸೇರಿದ್ದೇನೆ. ಕಣದಲ್ಲಿದ್ದು ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡುವಂತೆ ಜನರೆದುರು ಹೋಗುವೆ ಎಂದು ನಮೋಶಿ ಹೇಳಿದ್ದಾರೆ.
ಕೆಜೆಪಿ ಕದ ತಟ್ಟಿದ್ದರು: ನಮೋಶಿಯವರು ಮೊದಮೊದಲು ಕೆಜೆಪಿಗೆ ಸೇರ್ಪಡೆಯಾಗುವ ಬಯಕೆಯಿಂದ ಯಡಿಯೂರಪ್ಪ ಪಾಳಯದ ಬಾಗಿಲು ಸಹ ಬಡಿದಿದ್ದರು. ಆದರೆ ಈಗಾಗಲೇ ಕೆಜೆಪಿಯಿಂದ ಗುಲ್ಬರ್ಗ(ದ) ಅಭ್ಯರ್ಥಿಯನ್ನಾಗಿ ಮಾಜಿ ಸಚಿವ, ಹಿರಿಯ ಹೋರಾಟಗಾರ ಕಾಂತಾ ಅವರಿಗೆ ಕಣಕ್ಕಿಳಿಸಿದ್ದರಿಂದ ಅವರಿಗೆ ಕೆಜೆಪಿಯಲ್ಲಿ ಎಂಟ್ರಿ ಸುಲಭವಾಗಿ ದೊರಕಲಿಲ್ಲ. ಪಕ್ಷಕ್ಕೆ ಬಂದರೂ ಟಿಕೆಟ್ ಗ್ಯಾರಂಟಿ ಇಲ್ಲ ಎಂಬ ಮಾತು ಕೇಳಿ ಬಂದಾಗ ನಮೋಶಿಯವರು ಬೇರೆ ದಾರಿ ಕಾಣದೆ ಜಾತ್ಯತೀತ ಜನತಾದಳದತ್ತ ದಾಪುಗಾಲು ಹಾಕುವಂತಾಯ್ತು ಎಂಬುದು ಅವರ ಆಪ್ತರ ವಿವರಣೆ.
ನಮೋಶಿಯವರು ಈಗಾಗಲೇ ಬೆಂಗಳೂರಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಅಲ್ಲಿಂದ ಗುಲ್ಬರ್ಗಕ್ಕೆ ಬಂದವರೆ ಸೋಮವಾರ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಸಿದ ನಂತರ ತಮ್ಮ ಬೆಂಬಲಿಗರನ್ನೆಲ್ಲ ಜೆಡಿಎಸ್ಗೆ ಸೇರ್ಪಡೆ ಮಾಡಿಸುವಂತಹ ಬೃಹತ್ ಕಾರ್ಯಕ್ರಮ ಸಂಘಟಿಸುವುದಾಗಿ ನಮೋಶಿ ಹೇಳಿದ್ದಾರೆ.
ಹಣಾಹಣಿ ಕಣ: ನಮೋಶಿ ಜೆಡಿಎಸ್ನಿಂದ ಸ್ಪರ್ಧಿಸುತ್ತಿರುವ ಕಾರಣ ಗುಲ್ಬರ್ಗ(ದ) ಕ್ಷೇತ್ರ ಈ ಬಾರಿ ತೀವ್ರ ಹಣಾಹಣಿ ಕಣವಾಗಿ ಹೊರಹೊಮ್ಮಲಿದೆ. ಈಗಾಗಲೇ ಕೆಜೆಪಿ ಇಲ್ಲಿ ಎಸ್ಕೆ ಕಾಂತಾರನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್ ವೀರೇಂದ್ರ ಪಾಟೀಲರ ಪುತ್ರ ಕೈಲಾಸನಾಥ ಪಾಟೀಲರಿಗೆ ಅಭ್ಯರ್ಥಿಯಾಗಿಸಿದೆ.

ಜನರ ಅದಾಲತ್ನಲ್ಲಿ ನ್ಯಾಯ- ಅನ್ಯಾಯ ನಿರ್ಣಯ
ಟಿಕೆಟ್ ವಂಚಿಸಿ ಬಿಜೆಪಿ ಮೋಸ ಮಾಡಿದೆ. ನನ್ನ ರಾಜಕೀಯ ಎದುರಾಳಿಗೆ ಕಣಕ್ಕಿಳಿಸಿ ನೇರವಾಗಿ ಎದೆಗೇ ಚೂರಿ ಹಾಕಿದೆ. ಇಷ್ಟಿದ್ದರೂ ಕಣದಿಂದ ದೂರ ಸರಿದು ಮೌನವಾಗಿದ್ದರೆ ಜನರ ಮಧ್ಯೆ ಹೋಗುವ ಸಂದೇಶವಾದರು ಎಂತಹದ್ದು ಜನರೇ ನನಗೆ ಸಂಪರ್ಕಿಸಿ ಕಣದಲ್ಲಿ ಬನ್ನಿ ಎಂದು ಆಗ್ರಹಿಸಿದ್ದಾರೆ. ಅದಕ್ಕೇ ನಾನೀಗ ಜೆಡಿಎಸ್ನಿಂದ ಸ್ಪರ್ಧಿಸುವೆ. ನ್ಯಾಯ- ಅನ್ಯಾಯದ ಚರ್ಚೆಗಳನ್ನೆಲ್ಲ ಜನತಾ ಅದಾಲತ್ನಲ್ಲಿ ಚರ್ಚೆಗೆ ಹಾಕುತ್ತಿರುವೆ. ಅಲ್ಲಿನ ನಿರ್ಣಯವನ್ನು ಯಥಾವತ್ತಾಗಿ ಸ್ವೀಕರಿಸುವೆ.
- ಶಶಿಲ್ ನಮೋಶಿ, ಗುಲ್ಬರ್ಗ(ದ) ಜೆಡಿಎಸ್ ಅಭ್ಯರ್ಥಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement