ದಾಖಲೆಗಳಿಲ್ಲದ ಧನರಾಶಿ; ಬೆಚ್ಚಿದ ಜಿಲ್ಲಾಡಳಿತ- ಪೊಲೀಸ್
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.14
ಚುನಾವಣೆ ಸಂದರ್ಭದಲ್ಲಿ ನಾಕಾಬಂದಿ ಜಾರಿಗೊಳಿಸಿ ಸಂಶಯ ಬರುವ ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸುತ್ತಿರುವ ಜಿಲ್ಲಾಡಳಿತ ಶನಿವಾರ ರಾತ್ರಿ ನಗರದ ಸುತ್ತಮುತ್ತ ದೊರಕಿರುವ ಸೂಕ್ತ ದಾಖಲೆಗಳಿಲ್ಲದೆ ಸಾಗಾಟವಾಗುತ್ತಿದ್ದ ಅಪಾರ ಧನರಾಶಿ ಹಾಗೂ ಬೆಳ್ಳಿ ಸಾಮಾನುಗಳನ್ನು ವಶಪಡಿಸಿಕೊಂಡಿದ್ದಾರೆ.
ಆದರೆ ಪೊಲೀಸ್ ಕಾರ್ಯಾಚರಣೆಯಲ್ಲಿ ದೊರಕಿರುವ 40 ಲಕ್ಷ ನಗದು ಹಾಗೂ 25 ಕೆಜಿ ಬೆಳ್ಳಿ ಸಾಮಾನುಗಳು ಯಾವ ರಾಜಕೀಯ ನಾಯಕರಿಗಾಗಲಿ, ಪಕ್ಷಗಳಿಗಾಗಲಿ ಸೇರಿದ್ದಲ್ಲ ಎಂಬ ಸಂಗತಿ ಮೇಲ್ನೋಟಕ್ಕೆ ಸಾಬೀತಾಗಿದೆ.
ಸೇಲಂ ವರ್ತಕರಿಗೆ ಸೇರಿದ್ದು: ಕಪನೂರು ಬಳಿ ನಡೆದ ದಾಳಿಯಲ್ಲಿ ವಾಹನವನ್ನು ತಪಾಸಣೆ ಮಾಡಲಾಗಿ ಅದರಲ್ಲಿ ದೊರಕಿರುವ 25 ಕೆಜಿ ತೂಕದ ಬೆಳ್ಳಿ ಚೈನುಗಳು ತಮಿಳುನಾಡು ಮೂಲದ ಸೇಲಂ ಆಭರಣ ವರ್ತಕರದ್ದು ಎಂಬುದು ಗೊತ್ತಾಗಿದೆ. ವಾಹನದಲ್ಲಿರುವವರು ಇದನ್ನೇ ಮಾಹಿತಿ ನೀಡಿದ್ದಾರೆ.
ಪರಿಶೀಲನೆಗಾಗಿ ಸೇಲಂಗೂ ಸಂಪರ್ಕಿಸಿದ್ದು ಅಲ್ಲಿಂದಲೂ ಈ ವಿಚಾರ ದೃಢಪಟ್ಟಿದೆ. ಆದಾಗ್ಯೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳ್ಳಿ ಸಾಮಾನು ಗುಲ್ಬರ್ಗಕ್ಕೆ ಬರುತ್ತಿದ್ದರೂ ಆದಾಯ ತೆರಿಗೆ(ಐಟಿ) ಸೇರಿದಂತೆ ಯಾವುದೇ ವಿಧದ ಸೂಕ್ತ ದಾಖಲೆಗಳನ್ನು ಹೊಂದಿರಲಿಲ್ಲ. ಇದರಿಂದಾಗಿಯೇ ಪೊಲೀಸರು ದಾಳಿ ವೇಳೆ ಕಂಡ ಈ ಸಾಮಾನುಗಳನ್ನು ಜಪ್ತಿ ಮಾಡಿಕೊಳ್ಳಲು ಕಾರಣವಾಗಿದೆ. ವಿಚಾರಣೆ ಸಂದರ್ಭದಲ್ಲಿ ವರ್ತಕ ರಾಘವೇಂದ್ರ ಮೈಲಾಪುರ ಹೆಸರು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಧನರಾಶಿ ಮಹಾರಾಷ್ಟ್ರರದ್ದು: ತಾಜಸುಲ್ತಾನಪುರ ಹಾಗೂ ಹೀರಾಪುರ ಕ್ರಾಸ್ ಬಳಿ ನಡೆದ ದಾಳಿಗಳಲ್ಲಿ ಮಹಾರಾಷ್ಟ್ರ ಮೂಲದ ವಾಹನಗಳಲ್ಲಿ ಅಪಾರ ಧನ ಸಾಗಿಸಲಾಗುತ್ತಿತ್ತು. ಕಾರೊಂದರಲ್ಲಿ 2 ಲಕ್ಷ ಮಾತ್ರ ಹೊರಗಡೆ ಕಂಡರೂ ಕಾರಿನ ಸಂದುಗೊಂದುಗಳಲ್ಲೆಲ್ಲ 15ರಿಂದ 17 ಲಕ್ಷ ಅಡಗಿಸಿ ಇಟ್ಟಿರುವುದು ಪತ್ತೆಯಾಗಿದೆ. ಕಾರಿನಲ್ಲಿದ್ದವರಿಗೆ ವಿಚಾರಿಸಲಾಗಿದ್ದು, ಅವರು ಭದ್ರತೆ ಕಾರಣ ನೀಡಿದ್ದಾರೆ. ಪ್ಲಾಟ್ ಮಾರಿ ಬಂದ ಹಣವಿದು. ಅದನ್ನು ಮಹಾರಾಷ್ಟ್ರದ ಬೀಡ್ಗೆ ಸಾಗಿಸಲಾಗುತ್ತಿದೆ ಎಂದು ಹೇಳಿದ್ದಾರಾದರೂ ಸೂಕ್ತ ದಾಖಲೆಗಳನ್ನು ಪರಿಶೀಲಿಸಿಯೇ ಅವರಿಗೆ ಹಣ ಮರಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಇನ್ನೊಂದು ಪ್ರಕರಣದಲ್ಲಿ ತಾಜಸುಲ್ತಾನಪುರದಲ್ಲಿ 20 ಲಕ್ಷವಿರುವ ವಾಹನ ತಪಾಸಣೆಯಾಗಿದೆ. ಇಲ್ಲಿಯೂ ಬ್ಯಾಗ್ಗಳಲ್ಲಿ ಹಣ ಇಡಲಾಗಿತ್ತು. ಇದಕ್ಕೂ ಸೂಕ್ತ ದಾಖಲೆಗಳು ದೊರಕಿಲ್ಲ. ಗುಲ್ಬರ್ಗ ಮೂಲದವರು ಎಂದು ತಿಳಿದು ಬಂದಿದೆ. ಬಿಸಿನೆಸ್ ಕಾರಣ ಹೇಳಿ ಹಣ ಸಾಗಣೆ ಸಮರ್ಥಿಸಿಕೊಂಡಿದ್ದಾರೆ. ಆದರೂ ಪೊಲೀಸರು ದಾಖಲೆ ಕೇಳಿದ್ದಾರೆ.
ಎಫ್ಐಆರ್ ಇಲ್ಲ
ಶೋಧ ಕಾಲದಲ್ಲಿ ದೊರಕಿರುವ ಅಪಾರ ಹಣ ಹಾಗೂ ಬೆಳ್ಳಿ ಸಾಮಾನುಗಳ ಮೂಲದ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಮೇಲ್ನೋಟಕ್ಕೆ ಇವು ವರ್ತಕರು ಹಾಗೂ ಬಿಸಿನೆಸ್ ಮನ್ಗಳ ಸ್ವತ್ತು ಎಂಬುದು ಗೊತ್ತಾಗಿದೆ. ದಾಖಲೆಗಳು ಕೈ ಸೇರಿದ ನಂತರವಷ್ಟೇ ಸದರಿ ಧನರಾಶಿ, ಬೆಳ್ಳಿ ಚೈನ್ಗಳನ್ನು ಸಂಬಂಧಪಟ್ಟವರಿಗೆ ಮರಳಿಸಲಾಗುತ್ತದೆ. ಅದಕ್ಕೆಂದೇ ಎಫ್ಐಆರ್ ದಾಖಲಿಸಲಾಗಿಲ್ಲ.
- ಎನ್. ಸತೀಶಕುಮಾರ್,
ಪೊಲೀಸ್ ವರಿಷ್ಠಾಧಿಕಾರಿ.