ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನಾಯಕರ ಬೆಂಬಲ, ವೈಜನಾಥ್ಗೆ ಆನೆಬಲ

Lingaraj Badiger
Updated On : 15 Apr 2013, 11:20 am

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.14
ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಜಿಲ್ಲೆಯ ಸೇಡಂ ಅಸೆಂಬ್ಲಿ ಕಣದಲ್ಲಿ ಕೆಜೆಪಿ ಅಭ್ಯರ್ಥಿ, ಕಲಂ 371 ಹೋರಾಟಗಾರ ವೈಜನಾಥ ಪಾಟೀಲರಿಗೆ ಸ್ಥಳೀಯ ನಾಯಕರ ಭಾರಿ ಬೆಂಬಲ ವ್ಯಕ್ತವಾಗಿದೆ. ಇದರಿಂದಾಗಿ ಬಹುಸಂಖ್ಯಾತ ರೆಡ್ಡಿಗಳ ನಾಡಲ್ಲಿ ವೈಜನಾಥ ಚುನಾವಣಾ ಯುದ್ಧದಲ್ಲಿ ಶುಭಾರಂಭ ಮಾಡಿದಂತಾಗಿದೆ.
ವಿಧಾನಸಭೆ ಮಾಜಿ ಉಪಸಬಾಪತಿ ಚಂದ್ರಶೇಖರ ರೆಡ್ಡಿ ಮದನಾ ದೇಶಮುಖ, ಕೋಲಿ ಸಮಾಜದ ಮುಖಂಡ ನರೇಶ ಮಲ್ಕೂಡ್, ಜಿಪಂ ಮಾಜಿ ಸದಸ್ಯ ಡಾ. ವೆಂಕಟರೆಡ್ಡಿ ಪಾಟೀಲ್, ಕೋಲ್ಕುಂದಾ, ಶರಣರೆಡ್ಡಿ ಜಿಲೆಡಪಲ್ಲಿ, ನಾಗಭೂಷಣರೆಡ್ಡಿ, ಶರಣರೆಡ್ಡಿ ಇಮ್ರಾಪೂರ, ಪರ್ವತರೆಡ್ಡಿ, ಮಲ್ಲಿಕಾರ್ಜುನ ಮಂತಟ್ಟಿ ಸೇರಿದಂತೆ ಸೇಡಂ ಪ್ರಮುಖ ನಾಯಕರು ತಮ್ಮ ಅಪಾರ ಬೆಂಬಲಿಗರೊಂದಿಗೆ ವೈಜನಾಥ ಪಾಟೀಲರನ್ನು ಬೆಂಬಲಿಸುವುದಾಗಿ ಘೋಷಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಈ ನಾಯಕರು, ವೈಜನಾಥ ಪಾಟೀಲರ ಕಲಂ 371 ಹೋರಾಟಕ್ಕೆ ತಾವೆಲ್ಲರೂ ಮೆಚ್ಚಿಕೊಂಡಿದ್ದಾಗಿ ಹೇಳಿದರಲ್ಲದೆ ಹೈ-ಕ ಭಾಗದ ಜನ ವೈಜನಾಥರನ್ನು ಬೆಂಬಲಿಸಲೇಬೇಕು ಎಂದರು.
ಸೇಡಂಗೆ ಏ.16ರಂದು ಯಡಿಯೂರಪ್ಪ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ನಾಯಕರೊಂದಿಗೆ ಮಾತುಕತೆ ನಡೆಸಿ ತಾವೆಲ್ಲರೂ ಮುಖಂಡರು ಕೆಜೆಪಿ ಅಧಿಕೃತವಾಗಿ ಸೇರುವುದಾಗಿ ಹೇಳಿದರು.
ವೈಜನಾಥ ಜಯದ ವಿಶ್ವಾಸ: ಕಲಂ 371 ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಸದನದಲ್ಲಿ ಧ್ವನಿ ಎತ್ತಲು ಕಣಕ್ಕಿಳಿಯಿರಿ ಎಂದು ಬೆಂಬಲಿಗರು ಆಗ್ರಹಿಸಿದ್ದರಿಂದ ತಾವು ಸೇಡಂ ಕಣಕ್ಕೆ ಬಂದುದಾಗಿ ಹೇಳಿದ ವೈಜನಾಥ ಪಾಟೀಲ್, ತಮಗೆ ಅಲ್ಲಿ ಸಿಕ್ಕ ಜನಸ್ಪಂದನೆಯಿಂದ ಗೆಲವು ನಿಶ್ಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷ ಕಲಂ 371 ಲಾಭ ಪಡೆಯುವ ಹವಣಿಕೆಯಲ್ಲಿದ್ದರೂ ಜನತೆ ಹೋರಾಟ ಮಾಡಿದವರನ್ನು ಮರೆಯೋದಿಲ್ಲ ಎಂಬ ವಿಶ್ವಾಸ ತಮಗಿದೆ ಎಂದ ವೈಜನಾಥ, ಸೇಡಂನಲ್ಲಿ ಮದನಾ, ಮಲಕೂಡ್ ಹಾಗೂ ಗೆಳೆಯರ ಆಗಮನದಿಂದ ತಮಗೆ ಹೆಚ್ಚಿನ ಹುಮ್ಮಸ್ಸು ಬಂದಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement