ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪ್ರಗತಿಗೆ ಮಠಗಳ ಕೊಡುಗೆ ಅಪಾರ

Lingaraj Badiger
Updated On : 15 Apr 2013, 11:24 am

ಯಾದಗಿರಿ: ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯ ಸಂವರ್ಧನೆಗೆ ಶ್ರಮಿಸಿದ ಮಠ ಮಾನ್ಯಗಳು ನಾಡಿನ ಪ್ರಗತಿಗೆ ಅಪಾರ ಕೊಡುಗೆ ನೀಡಿವೆ ಎಂದು ವೀರಶೈವ ಸಮಾಜದ ಹಿರಿಯ ಮುಖಂಡ ಡಾ.ಭೀಮಣ್ಣ ಖಂಡ್ರೆ ಹೇಳಿದರು.
  ತಾಲೂಕಿನ ಸುಕ್ಷೇತ್ರ ಅಬ್ಬೆತುಮಕೂರ ಸಿದ್ದಸಂಸ್ಥಾನ ಮಠದಲ್ಲಿ ಡಾ. ಗಂಗಾಧರ ಸ್ವಾಮೀಜಿ ನೇತೃತ್ವದಲ್ಲಿ ಭಾನುವಾರ ನಡೆದ 770 ಅಮರ ಗಣಂಗಳ ಮಂಟಪ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಲೋಕ ಕಲ್ಯಾಣಕ್ಕಾಗಿ 5 ದಿನಗಳ ಕಾಲ ಶ್ರೀಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಸಮಾಜದಲ್ಲಿ ಬದಲಾವಣೆಯ ಸಂಕೇತ. ಪ್ರಸಕ್ತ ದಿನಮಾನಗಳಲ್ಲಿ ಜನತೆ ಧರ್ಮದ ಹಾದಿಯಲ್ಲಿ ಸಾಗುವಂತೆ ಮತ್ತು ಪ್ರೇರಣೆ ನೀಡುವಂತೆ ಮಾಡುವಲ್ಲಿ ಇಂತಹ ಸಮಾರಂಭಗಳು ಅರ್ಥಪೂರ್ಣ ಎನಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಜನ ಜಾಗೃತಿ: ಇನ್ನೊಬ್ಬ ಮುಖಂಡ ಎನ್. ತಿಪ್ಪಣ್ಣ ಮಾತನಾಡಿ, ಆರೋಗ್ಯಕರ ಸಮಾಜ ನಿರ್ಮಾಣವಾಗಲು ನಾಡಿನ ಮಠಾಧೀಶರ ಸಲಹೆ, ಸೂಚನೆ, ಮಾರ್ಗದರ್ಶನ ಅಗತ್ಯವಾಗಿದೆ. ಇಲ್ಲಿನ ಶ್ರೀಗಳು ಈ ಭಾಗದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನ ಜಾಗೃತಿ ಮೂಡಿಸುವುದರ ಜತೆಗೆ ಶಿಕ್ಷಣಕ್ಕೆ ಆದ್ಯತೆ ನೀಡಿ ಇತರರಿಗೆ ಮಾದರಿಯಾಗಿದ್ದಾರೆ. ಅವರ ಕೆಲಸಗಳಿಗೆ ಭಕ್ತರು ಅಗತ್ಯ ಸಹಾಯ ನೀಡುತ್ತಿರುವುದು ಹೊಸ ಬೆಳವಣಿಗೆಯಾಗಿದೆ ಎಂದರು.
ಮಹತ್ವ: ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಶಿವಾಚಾರ್ಯ ಸ್ವಾಮಿ, ವೀರಶೈವ ಪರಂಪರೆಯಲ್ಲಿ ಗುರು, ಲಿಂಗ, ಜಂಗಮ ಇವುಗಳಿಗೆ ತುಂಬಾ ಮಹತ್ವವಿದೆ. ತನುವನ್ನು ಗುರುವಿಗೆ, ಮನವನ್ನು ಲಿಂಗಕ್ಕೆ, ಧನವನ್ನು ಜಂಗಮಕ್ಕೆ ಅರ್ಪಿಸಿದಾಗ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ ಎಂದರು.
   ಬಸವಾದಿ ಶರಣರ 770 ಅಮರಗಣಂಗಳ ಸ್ಮರಣಾರ್ಥ 770 ಗುರು, ಜಂಗಮ ಪಾದ ಪೂಜೆಯನ್ನು ನೆರವೇರಿಸುತ್ತಿರುವ ಭಕ್ತ ಸಮೂಹ ನಿಜವಾಗಿಯೂ ಅವರು ಪವಿತ್ರಾತ್ಮರಾಗುತ್ತಾರೆಂದು ಹೇಳಿದರು.
  ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮಿ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದರು. ವೇದಿಕೆ ಮೇಲೆ ಸುಲಫಲ ಮಠದ ಮಹಾಂತ ಶಿವಾಚಾರ್ಯ, ಶಹಾಪುರದ ಗುರುಪಾದ ಸ್ವಾಮಿ, ದೋರನಳ್ಳಿ ಶ್ರೀ, ಚಿತ್ತಾಪುರ ಶ್ರೀ, ಚೌಡಾಪುರ ಶ್ರೀ, ಸೊನ್ನದ ಶ್ರೀ, ದೇವಾಪುರ ಶ್ರೀ, ದೇವರಾಯ ನಾಡೆಪಲ್ಲಿ, ಸಿದ್ದರಾಮ ಮೇತ್ರೆ, ದೊಡ್ಡಪ್ಪಗೌಡ ಪಾಟೀಲ್ ನರಿಬೋಳಿ, ಲಿಂಗನಗೌಡ ಮಲ್ಹಾರ್, ಶಾಂತರಡ್ಡಿ ವನಕೇರಿ, ಎಸ್.ಬಿ. ಪಾಟೀಲ್ ಇತರರು ಇದ್ದರು.

770 ಅಮರ ಗಣಂಗಳ ಪೂಜೆ...
ಯಾದಗಿರಿ: 770 ಅಮರಗಣಂಗಳ ಸ್ಮರಣಾರ್ಥವಾಗಿ ಮಹಾಮಂಟಪಗಳಲ್ಲಿ ಗುರು ಜಂಗಮರ ಪಾದಪೂಜೆಯನ್ನು ಅಭೂತಪೂರ್ವವಾಗಿ ನೆರವೇರಿಸುವ ಮೂಲಕ ಅಬ್ಬೆತುಮಕೂರ ಸಿದ್ದಸಂಸ್ಥಾನ ಮಠ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾಯಿತು.
ಮೆರವಣಿಗೆ: ಈ ಧಾರ್ಮಿಕ ಕಾರ್ಯಕ್ರಮದ ನಿಮಿತ್ತವಾಗಿ ಭಾನುವಾರ ಬೆಳಗ್ಗೆಯಿಂದಲೇ ನಾಡಿನ ಮೂಲೆ ಮೂಲೆಗಳಿಂದ ಭಕ್ತ ಸಮೂಹ ಸಾಗರೊಪಾದಿಯಲ್ಲಿ ಅಬ್ಬೆತುಮಕೂರಿಗೆ ಹರಿದು ಬಂದಿತು. ಮೈಸೂರ, ಹಾಸನ, ಹಾವೇರಿ, ಗದಗ, ಬೆಳಗಾವಿ, ಧಾರವಾಡ, ಬೀದರ್ ಮತ್ತು ಸೋಲಾಪೂರ ಮುಂತಾದ ಭಾಗಗಳಿಂದ 770 ಪರಮ ಪೂಜ್ಯರನ್ನು ಆಹ್ವಾನಿಸಲಾಗಿತ್ತು. ಸುಮಂಗಲಿಯರ ಕಳಸ, ಮಂಗಲವಾದ್ಯಗಳೊಂದಿಗೆ ಪಾದಗಟ್ಟೆಯಿಂದ ಶ್ರೀಮಠಕ್ಕೆ ಈ ಪೂಜ್ಯರನ್ನು ಭಕ್ತರು ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.
ಪ್ರಾರಂಭ: ತಳಿರು ತೋರಣಗಳಿಂದ ಅಲಂಕರಿಸಿದ 770 ಮಂಟಪಗಳಲ್ಲಿ ಅಷ್ಟೇ ಸಂಖ್ಯೆಯ ದಂಪತಿ ಪಾದಪೂಜೆಗಾಗಿ ಸಿದ್ಧಗೊಂಡು ಕುಳಿತಿದ್ದರು. ಪೀಠಾಧಿಪತಿ ಡಾ.ಗಂಗಾಧರ ಸ್ವಾಮೀಜಿ ಉಭಯ ಜಗದ್ಗುರುಗಳ ಪಾದಪೂಜೆ ನೆರವೇರಿಸುತ್ತಲೇ ಅತ್ತ 770 ಪೂಜ್ಯರ ಪಾದ ಪೂಜೆ ಪ್ರಾರಂಭಗೊಂಡಿತು. ಗುರು ಜಂಗಮರ ಪಾದ ಪೂಜೆಯನ್ನು ಭಕ್ತಿಭಾವದಿಂದ ಮಾಡಿದ ದಂಪತಿ ಧನ್ಯತಾ ಭಾವ ಅನುಭವಿಸಿದರು.
  ಬಸವಾದಿ ಶರಣರ ಸಂದರ್ಭದಲ್ಲಿ 770 ಅಮರ ಗಣಂಗಳ ಪರಂಪರೆ ನಂತರ 1952ರಲ್ಲಿ ಬಂತನಾಳದ ಸಂಗನ ಬಸವ ಶಿವಯೋಗಿಗಳು 770 ಅಮರಗಣಂಗಳ ಪೂಜೆ ನೆರವೇರಿಸಿದ್ದರು. ಸರಿ ಸುಮಾರು ಆರು ದಶಕಗಳ ನಂತರ ಅಬ್ಬೆತುಮಕೂರಿನಲ್ಲಿ 770 ಗುರು, ಜಂಗಮ ಪಾದಪೂಜೆಯನ್ನು ನೆರವೇರಿಸಿದ ಕೀರ್ತಿಗೆ ಸಿದ್ಧಸಂಸ್ಥಾನ ಮಠ ಭಾಜನವಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement