ಕೋಟಿ ಮೌಲ್ಯದ ಅಭ್ಯರ್ಥಿಗಳು
ಯಾದಗಿರಿ: ವಿಧಾಸಭೆ ಕ್ಷೇತ್ರಕ್ಕೆ ಸ್ಪರ್ಧಿಸಲು ಸೋಮವಾರ ನಾಮಪತ್ರ ಸಲ್ಲಿಸಿರುವ ನಾನಾ ಪಕ್ಷದ ಅಭ್ಯರ್ಥಿಗಳು ತಮ್ಮ ಆಸ್ತಿ ಮೌಲ್ಯವನ್ನು ಘೋಷಿಸಿಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಚಂದ್ರಶೇಖರಗೌಡ ಮಾಗನೂರ ಅವರ ಹೆಸರಿನಲ್ಲಿ 1,66,83,000 ಹಾಗೂ ಪತ್ನಿ ಹೆಸರಲ್ಲಿ 17,93,209 ಮೌಲ್ಯದ ಚರಾಸ್ಥಿಯಿದೆ. ಅಲ್ಲದೇ ಮಾಗನೂರ ಹೆಸರಿನಲ್ಲಿ 14,10,300 ಹಾಗೂ ಪತ್ನಿ ಹೆಸರಿನಲ್ಲಿ 6,75,000 ಮೌಲ್ಯದ ಸ್ಥಿರಾಸ್ತಿ ಇದೆ ಎಂದು ತಿಳಿಸಿದ್ದಾರೆ.
ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ ಮೌಲಾಲಿ ಅನಪುರ ಅವರ ಬಳಿ 16 ಲಕ್ಷ ಚರಾಸ್ಥಿಯಿದೆ. ಅಲ್ಲದೇ 2.40 ಕೋಟಿ ಮೌಲ್ಯದ ಸ್ಥಿರಾಸ್ತಿಯಿದೆ ಎಂದು ಅವರು ಘೋಷಿಸಿಕೊಂಡಿದ್ದಾರೆ. ಪಕ್ಷೇತರ ಅಭ್ಯರ್ಥಿ ಜಲಂದರಾವ ಬಳಿ 2 ಲಕ್ಷ ನಗದು, ಪತ್ನಿ ಬಳಿ 50 ಸಾವಿರ ನಗದು ಹಾಗೂ 2 ತೊಲೆ ಬಂಗಾರ, ತಾಯಿ ಹೆಸರಿನಲ್ಲಿ 2 ತೊಲೆ ಬಂಗಾರ, ಜಲಂದರರಾವ ಬಳಿ 2 ತೊಲೆ ಬಂಗಾರ ಇದೆ. ತಾಯಿ ಹೆಸರಿನಲ್ಲಿ 15 ಲಕ್ಷ ಮೌಲ್ಯದ ಸ್ಥಿರಾಸ್ಥಿಯಿದೆ ಎಂದು ಆಸ್ತಿ ಘೋಷಣೆ ಮಾಡಿದ್ದಾರೆ.