ಬಿಜೆಪಿ ವಿರುದ್ಧ ನಮೋಶಿ ರಣಕಹಳೆ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.15
ಟಿಕೆಟ್ ವಂಚಿತರಾಗಿ ಬಿಜೆಪಿ ಬಿಟ್ಟು ಹೊರಬಂದಿರುವ ಶಶಿಲ್ ನಮೋಶಿ ಜೆಡಿಎಸ್ ಸೇರಿ ತೆನೆ ಹೊತ್ತವರಾಗಿ ಸೋಮವಾರ ಗುಲ್ಬರ್ಗ (ದ) ಅಸೆಂಬ್ಲಿ ಅಖಾಡದಲ್ಲಿ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ. ಇದರೊಂದಿಗೆ ನಮೋಶಿ ತಮಗೆ ಟಿಕೆಟ್ಛ ನೀಡದೆ ವಂಚನೆ ಮಾಡಿರುವ ಬಿಜೆಪಿಯೊಂದಿಗೆ ನೇರವಾಗಿಯೇ ಸಮರ ಸಾರಿದಂತಾಗಿದೆ.
ಶಶಿಲ್ ನಮೋಶಿ ತಮ್ಮ ಅಭಿಮಾನಿಗಳು ಹಾಗೂ ಬೆಂಬಲಿಗರೊಂದಿಗೆ ಸುಡು ಬಿಸಿಲಲ್ಲೇ ತೆನೆ ಹೊತ್ತ ಮಹಿಳೆಯೊಂದಿಗೆ ತೆರೆದ ಜೀಪಿನಲ್ಲಿ ಮೆರವಣಿಗೆಯಲ್ಲಿ ಬಂದು ಪಾಲಿಕೆಯಲ್ಲಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಟಿಕೆಟ್ ನೀಡದೆ ವಂಚಿನೆ: ಬಿಜೆಪಿಯಲ್ಲೇ ಸತತ 22 ವರ್ಷಕ್ಕೂ ಹೆಚ್ಚುಕಾಲವಿದ್ದು, ಆ ಪಕ್ಷವನ್ನು ಈ ಭಾಗದಲ್ಲಿ ಕಟ್ಟಿ ಬೆಳೆಸಿದವರು ನಮೋಶಿ. ಆದರೆ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷ ಇವರಿಗೆ ಟಿಕೆಟ್ ನೀಡದೆ ವಂಚಿಸಿತ್ತು. ಬಿಜೆಪಿ, ಇಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ದತ್ತಾತ್ರೇಯ ಪಾಟೀಲರನ್ನು ಆಹ್ವಾನಿಸಿ ಟಿಕೆಟ್ ನೀಡಿತ್ತು. ಈ ಬೆಳವಣಿಗೆಯೇ ನಮೋಶಿಯವರನ್ನು ಕೆರಳುವಂತೆ ಮಾಡಿದ್ದು. ತಮ್ಮ ರಾಜಕೀಯ ವಿರೋಧಿಗೆ ಪಕ್ಷ ಕೈಬೀಸಿ ಕರೆದು ಟಿಕೆಟ್ ನೀಡಿತಲ್ಲ ಎಂದು ನಮೋಶಿ ಸಿಡಿದೆದ್ದು ಪಕ್ಷಕ್ಕೆ ಗುಡ್ ಬೈ ಹೇಳಿ ಜೆಡಿಎಸ್ ಸೇರಿದ್ದನ್ನು ಸ್ಮರಿಸಬಹುದು.
ಗುಲ್ಬರ್ಗ ದಕ್ಷಿಣ ಅಖಾಡ ಈ ಬೆಳವಣಿಗೆಯಿಂದಾಗಿ ತುಂಬ ರಂಗೇರಿದೆ. ಬಿಜೆಪಿಯಿಂದ ದತ್ತಾತ್ರೇಯ ಪಾಟೀಲ್, ಕೆಜೆಪಿಯಿಂದ ಹಳೆಹುಲಿ ಎಸ್.ಕೆ. ಕಾಂತಾ, ಕಾಂಗ್ರೆಸ್ನಿಂದ ವಿರೇಂದ್ರ ಪಾಟೀಲರ ಪುತ್ರ ಕೈಲಾಸನಾಥ ಪಾಟೀಲ್ ಸ್ಪರ್ಧಿಸುತ್ತಿರುವುದರಿಂದ ಈ ಅಖಾಡ ಬರುವ ದಿನಗಳಲ್ಲಿ ಇನ್ನೂ ಕಾವೇರುವ ನಿರೀಕ್ಷೆ ಇದೆ.