ಶಾಸಕರ ಮೌಲ್ಯ ಹೆಚ್ಚಳ, ಪತ್ನಿಯೇ ಶ್ರೀಮಂತೆ
ಯಾದಗಿರಿ: ಯಾದಗಿರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಶಾಸಕ ಡಾ. ಎ.ಬಿ. ಮಾಲಕರೆಡ್ಡಿ ಅವರ ಚರ ಹಾಗೂ ಸ್ಥಿರಾಸ್ತಿ ಮೌಲ್ಯ 2008ರ ಚುನಾವಣೆಗಿಂತ ಈ ಬಾರಿ ಮೂರು ಪಟ್ಟು ಹೆಚ್ಚಳವಾಗಿದೆ. ಅಲ್ಲದೆ, ಮಾಲಕರೆಡ್ಡಿ ಅವರಿಗಿಂತ ಪತ್ನಿಯೇ ಹೆಚ್ಚು ಶ್ರೀಮಂತರಾಗಿದ್ದಾರೆ.
ಡಾ. ಮಾಲಕರೆಡ್ಡಿ ಅವರ ಹೆಸರಿನಲ್ಲಿ 48,25,243 ಹಾಗೂ ಪತ್ನಿ ಡಾ. ಮಹಾದೇವಿ ಹೆಸರಿನಲ್ಲಿ 51,43,567 ಮೌಲ್ಯದ ಚರಾಸ್ತಿ ಇದೆ. ಅಲ್ಲದೇ ಅಭ್ಯರ್ಥಿ ಹೆಸರಿನಲ್ಲಿ 1.25 ಕೋಟಿ ಹಾಗೂ ಪತ್ನಿ ಹೆಸರಿನಲ್ಲಿ 1.75 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಅಂದರೆ ಇವರ ಒಟ್ಟು ಮೌಲ್ಯ 3.99 ಕೋಟಿ ಆಗುತ್ತದೆ ಎಂದು ಸೋಮವಾರ ನಾಮಪತ್ರದ ಜೊತೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಅವರು ಘೋಷಿಸಿಕೊಂಡಿದ್ದಾರೆ. 2008ರ ಚುನಾವಣೆಯಲ್ಲಿ ಮಾಲಕರೆಡ್ಡಿ ಅವರ ಒಟ್ಟು ಆಸ್ತಿ ಮೌಲ್ಯ 1.15 ಕೋಟಿ ಆಗಿತ್ತು.
ಪತ್ನಿಯೇ ಸಿರಿವಂತೆ: ಮಾಲಕರೆಡ್ಡಿ ಅವರ ಬಳಿ ಚರಾಸ್ತಿ ಹಾಗೂ ಸ್ಥಿರಾಸ್ತಿ ಸೇರಿ ಒಟ್ಟು 1.73 ಕೋಟಿ ಇದ್ದರೆ, ಪತ್ನಿ ಹೆಸರಿನಲ್ಲಿ 2.26 ಕೋಟಿ ಮೌಲ್ಯದ ಆಸ್ತಿಯಿದೆ. ಶಾಸಕರಿಗಿಂತ ಅವರ ಪತ್ನಿಯೇ ಹೆಚ್ಚು ಶ್ರೀಮತರಾಗಿದ್ದಾರೆ.
ಇದರಲ್ಲಿ ಡಾ. ಮಾಲಕರೆಡ್ಡಿ ಹೆಸರಿನಲ್ಲಿ 200 ಗ್ರಾಂ ಚಿನ್ನಾಭರಣ ಇದ್ದರೆ, ಪತ್ನಿ ಹೆಸರಿನಲ್ಲಿ 600 ಗ್ರಾಂ ಚಿನ್ನ ಇದೆ. ಪತಿ, ಪತ್ನಿ ಹೆಸರಿನಲ್ಲಿ ವಿವಿಧೆಡೆ ಜಮೀನು, ನಿವೇಶನ, ಮನೆಯಿದೆ ಎಂದು ತಿಳಿಸಿದ್ದಾರೆ.
ಆದರೆ ಇವರಿಗೆ ಸುಮಾರು 54 ಲಕ್ಷ ಸೌಲವೂ ಇದೆ. ಮಾಲಕರೆಡ್ಡಿ ಹೆಸರಿನಲ್ಲಿ 41,44,835 ಸಾಲ ಹಾಗೂ ಪತ್ನಿ ಹೆಸರಿನಲ್ಲಿ 12,87,534 ಸಾಲವಿದೆ ಎಂದು ತಮ್ಮ ಆಸ್ತಿ ಘೋಷಣೆಯಲ್ಲಿ ತಿಳಿಸಿದ್ದಾರೆ.