ಕಾಂಗ್ರೆಸ್ ಒಡೆದ ಮನೆ: ಬಿಎಸ್ವೈ
ಕನ್ನಡಪ್ರಭ ವಾರ್ತೆ, ಯಾದಗಿರಿ, ಏ.16
ನೂರಾರು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷವೀಗ ಒಡೆದ ಮನೆಯಾಗಿದೆ. ಸಿಎಂ ಸ್ಥಾನಕ್ಕೆ, ಪಕ್ಷದ ಟಿಕೆಟ್ಗಾಗಿ ಬಡಿದಾಟ ಶುರುವಾಗಿದೆ. ಸೋನಿಯಾ ಗಾಂಧಿ ವಿದೇಶದಿಂದ ಬಂದ ಬಳಿಕವೇ ಟಿಕೆಟ್ ಹಂಚಿಕೆಯಾಗಬೇಕು. ಇಂಥ ಸಂಸ್ಕೃತಿ ಇರುವ ಪಕ್ಷದ ಬದಲಾಗಿ, ಪ್ರಾದೇಶಿಕ ಪಕ್ಷದ ಅವಶ್ಯಕತೆಯಿದೆ. ಆದ್ದರಿಂದ ಕೆಜೆಪಿಯನ್ನು ಬೆಂಬಲಿಸಬೇಕೆಂದು ಮಾಜಿ ಸಿಎಂ ಯಡಿಯೂರಪ್ಪ ಕರೆ ನೀಡಿದರು.
ನಗರದ ಸಿನ್ನೂರು ಜಿನ್ ಸಭಾಂಗಣದಲ್ಲಿ ಮಂಗಳವಾರ ಕೆಜೆಪಿ ಅಭ್ಯರ್ಥಿ ಡಾ. ವೀರಬಸವಂತರರೆಡ್ಡಿ ಮುದ್ನಾಳ ಪರ ಪ್ರಚಾರ ಮಾಡಿ, ರಾಜ್ಯಕ್ಕೆ ಸ್ಥಿರ ಸರ್ಕಾರ ಅಗತ್ಯವಿದ್ದು ಅದು ಕೆಜೆಪಿಯಿಂದ ಮಾತ್ರ ಸಾಧ್ಯವಿದೆ ಎಂದರು.
ಮುಸ್ಲಿಮರ ಮೂಗಿಗೆ ತುಪ್ಪ ಸವರಿದ ಕಾಂಗ್ರೆಸ್: ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಮತ ಪಡೆದು ಅವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹಿಂದಿನ ಯಾವ ಮುಖ್ಯಮಂತ್ರಿಯೂ ನೀಡದಷ್ಟು ಅನುದಾನವನ್ನು ನಾನು ಸಿಎಂ ಆಗಿದ್ದಾಗ ನೀಡಿದ್ದೇನೆ. ಈ ಭಾಗದ ಖರ್ಗೆ, ಧರ್ರಸಿಂಗ್ ಅವರು ನಿಮ್ಮನ್ನು ಸೈಕಲ್ ಶಾಪ್, ಗ್ಯಾರೇಜ್ನಲ್ಲಿ ಕೆಲಸ ಮಾಡಲು ಹಚ್ಚಿದ್ದಾರೆ. ಆದರೆ ಎಲ್ಲ ಜನರೂ ಸುಖ ನೆಮ್ಮದಿಯಿಂದ ಬಾಳುವೆ ಮಾಡುವಂತಾಗಲು ನಾನು ಅವಿರತ ಶ್ರಮಿಸಿದ್ದೇನೆಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಹಾಗೂ ಕ್ಷೇತ್ರದ ಪ್ರತಿನಿಧಿ ಯಾರಾಗಬೇಕು ಎಂಬುದನ್ನು ನಿರ್ಧರಿಸುವ ಮಾಲೀಕರು ಮತದಾರರು. ಸ್ವಾಬಿಮಾನ, ನೆಮ್ಮದಿಯಿಂದ ಬದುಕಲು ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಹಿಂದಿನ ಚುನಾವಣೆ ಸಂದರ್ಭದಲ್ಲಿ ಮಾತು ಕೊಟ್ಟಂತೆ ಯಾದಗಿರಿಯನ್ನು ಜಿಲ್ಲೆಯನ್ನಾಗಿ ಮಾಡಿದ್ದೇನೆ.
ತಾಳೆ ಹಾಕಿ ಆಯ್ಕೆ ಮಾಡಿ: ಆದರೆ ಖರ್ಗೆ, ಧರಂಸಿಂಗ್ ಅವರು ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಮೀನಮೇಷ ಎಣಿಸಿದರು. ಆದ್ದರಿಂದ 27ನೇ ಸಿಎಂ ಆದ ನಾನು ಮಾಡಿದ ಕೆಲಸ ಹಾಗೂ ಉಳಿದ ಸಿಎಂ ಕಾಲದಲ್ಲಿ ಆಗಿರುವ ಕಾರ್ಯಗಳನ್ನು ತಾಳೆ ಮಾಡಿ ನೋಡಬೇಕು. ಆಗ ಯಾರು ಉತ್ತಮ ಎಂಬುದು ಗೊತ್ತಾಗುತ್ತದೆ. ಈಗ ಇದನ್ನು ನಿರ್ಧರಿಸುವ ಕಾಲ ಬಂದಿದೆ. ಮತದಾರರು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ, ಪಕ್ಷವನ್ನು ಬಲಪಡಿಸಬೇಕೆಂದು ಮನವಿ ಮಾಡಿದರು.
ಪಿತೂರಿಯಿಂದ ಸಿಎಂ ಸ್ಥಾನ ಕಳೆದುಕೊಂಡೆ: ಶಿಕ್ಷಣ, ನೀರಾವರಿ, ಉದ್ಯೋಗ, ಗ್ರಾಮೀಣಾಭಿವೃದ್ಧಿ ಹೀಗೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗಾಗಿ ನಾನು ಪ್ರಯತ್ನಿಸಿದ್ದೇನೆ. ಆದರೆ ಪಕ್ಷದೊಳಗಿನ ಪಿತೂರಿಯಿಂದ ಸಿಎಂ ಸ್ಥಾನ ಕಳೆದುಕೊಳ್ಳಬೇಕಾಯಿತು. ನಂತರ ಪಕ್ಷವನ್ನೇ ತೊರೆಯಬೇಕಾಯಿತು. ಭ್ರಷ್ಟಾಚಾರದ ಆರೋಪ ಹೊರಿಸಿ ಜೈಲಿಗೆ ಕಳುಹಿಸಿದರು. ಆದರೆ ನೋಟ್ ಎಣಿಸುವ ಯಂತ್ರವನ್ನು ಮನೆಯಲ್ಲಿ ಇಟ್ಟುಕೊಂಡ ಉಪ ಮುಖ್ಯಮಂತ್ರಿಯನ್ನು ಹುದ್ದೆಯಲ್ಲಿ ಮುಂದುವರಿಸಿದರು. ಇದಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರಲ್ಲಿ ಉತ್ತರವಿಲ್ಲ. ಇದು ರಾಜ್ಯದಲ್ಲಿ ಹೊಸ ಪಕ್ಷದ ಉದಯಕ್ಕೆ ಕಾರಣವಾಯಿತು. ರಾಜ್ಯಕ್ಕೆ ಮುಕ್ತಿ ಬೇಕಾಗಿತ್ತು, ಅದು ಕೆಜೆಪಿ ಸ್ಥಾಪನೆಯಿಂದ ಆಗಿದೆ. ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಸಂಘಟನೆ ಬಲಪಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಯಡಿಯೂರಪ್ಪ ಹೇಳಿದರು.
ಪಕ್ಷದ ಅಭ್ಯರ್ಥಿ ಡಾ. ವೀರಬಸವಂತರೆಡ್ಡಿ ಮುದ್ನಾಳ ಮಾತನಾಡಿದರು. ಶಹಾಪುರ ತಾಪಂನ 6 ಜನ ಬಿಜೆಪಿ ಸದಸ್ಯರು, ಕಾಂಗ್ರೆಸ್ ಹಾಗೂ ಜೆಡಿಎಸ್ನ ಅನೇಕ ಮುಖಂಡರು, ಕಾರ್ಯಕರ್ತರು ಕೆಜೆಪಿ ಸೇರಿದರು.
ಕೆಜೆಪಿ ರಾಜ್ಯ ಕಾರ್ಯದರ್ಶಿ ಡಾ. ಶರಣಭೂಪಾಲರೆಡ್ಡಿ ನಾಯ್ಕಲ್, ಪ್ರಮುಖರಾದ ಸುರೇಶ ಸಜ್ಜನ, ನಾಗರತ್ನಾ ಕುಪ್ಪಿ, ಸುಭಾಷ ಬಿರಾದಾರ, ಸಿದ್ದನಗೌಡ ಕಾಡಂನೋರ, ಉಮಾರೆಡ್ಡಿ ನಾಯ್ಕಲ್, ವಿನೋದ ಜೈನ್ ಇತರರು ಇದ್ದರು.