ಚುನಾವಣಾ ಕಾರ್ಯಕ್ಕೆ ಧಾರ್ಮಿಕ ಸ್ಥಳಗಳ ಬಳಸುವವರ ವಿರುದ್ಧ ಕ್ರಮ
ಗುಲ್ಬರ್ಗ: ವಿಧಾನಸಭೆ ಚುನಾವಣೆ ನೀತಿ ಸಂಹಿತೆಯನ್ವಯ ಯಾವುದೇ ರಾಜಕೀಯ ಪಕ್ಷಗಳು ದೇವಸ್ಥಾನ, ಮಂದಿರ, ಗುಡಿ, ಚರ್ಚ್, ಮಸೀದಿ ಮುಂತಾದ ಪ್ರಾರ್ಥನೆ ಮಾಡುವ ವಿವಿಧ ಧಾರ್ಮಿಕ ಸ್ಥಳಗಳನ್ನು ಚುನಾವಣಾ ಕಾರ್ಯಕ್ಕಾಗಿ ಬಳಸುವಂತಿಲ್ಲ. ಈ ನಿಯಮವನ್ನು ಉಲ್ಲಂಘಿಸುವವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ಜಿ. ಜಗದೀಶ ಸೂಚಿಸಿದ್ದಾರೆ.
ಯಾವುದೇ ಗುತ್ತಿಗೆದಾರರು ಯಾವುದೇ ವ್ಯಕ್ತಿ, ಪಂಗಡ ಅಥವಾ ಪಕ್ಷದಿಂದ ಹೊಸದಾಗಿ ಕೊಳವೆಬಾವಿಗಳನ್ನು ಕೊರೆಯುವುದು, ಹೊಸ ಕಾಮಗಾರಿಗಳನ್ನು ಪರವಾನಿಗೆಯಿಲ್ಲದೇ ಸ್ವಪ್ರೇರಿತರಾಗಿ ನೇರವಾಗಿ ಅಥವಾ ಪರೋಕ್ಷವಾಗಿ ಕೆಲಸ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ವಿಧಾನಸಭೆ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತವಾಗಿ ನಡೆಸುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕೇಟರಿಂಗ್ ಮತ್ತು ಖಾನಾವಳಿ ಸೇವೆ ಒದಗಿಸುವವರು ಸಾಮೂಹಿಕ ಊಟದ ವ್ಯವಸ್ಥೆ ಮಾಡದಂತೆ ಸೂಚಿಸಿದ್ದಾರೆ.
ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ನಿಟ್ಟಿನಲ್ಲಿ ಶ್ಯಾಮಿಯಾನಾ, ಮೈಕು, ಸೌಂಡ್ ಸಿಸ್ಟಮ್ ಸರಬರಾಜು ಮಾಡುವವರು ಯಾವುದೇ ಸೇವೆಗಳನ್ನು ನೀಡುವ ಮುನ್ನ ಶಾಸನಬದ್ಧ ಸಂಸ್ಥೆಯಿಂದ ಪರವಾನಿಗೆಯನ್ನು ಪಡೆದುಕೊಂಡಿರಬೇಕು. ಈ ಸೂಚನೆಗಳನ್ನು ಉಲ್ಲಂಘಿಸಿದಲ್ಲಿ ಸರಬರಾಜುದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಹಾಗೂ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ವೀಕ್ಷಕರ ಭೇಟಿಗೆ ಸಮಯ ನಿಗದಿ
ಚಿತ್ತಾಪುರ: ಚಿತ್ತಾಪುರ ವಿಧಾನಸಭೆ ಚುನಾವಣೆ ವೀಕ್ಷಕರಾಗಿ ಅಜಯಕುಮಾರ ಶರ್ಮಾ ಐಡಿಇಪಿ ನವದೆಹಲಿ ಅವರು ಪಟ್ಟಣಕ್ಕೆ ಮಂಗಳವಾರ ಆಗಮಿಸಿದ್ದಾರೆ. ಪ್ರವಾಸಿ ಮಂದಿರದಲ್ಲಿ ಅವರನ್ನು ಸಾರ್ವಜನಿಕರು ಚುನಾವಣೆ ಕುರಿತು ಕುಂದುಕೊರತೆ ಚರ್ಚಿಸಲು ಪ್ರತಿದಿನ ಸಂಜೆ 5 ಗಂಟೆಯಿಂದ 6 ಗಂಟೆವರೆಗೆ ಭೇಟಿಯಾಗಬಹುದು. ಮೊ. 94492 68918, 94484 05377ಗೆ ಸಂಪರ್ಕಿಸಬಹುದು.