'ಮಕ್ಕಳಲ್ಲಿ ಸಂಸ್ಕಾರದ ತಿಳಿವಳಿಕೆ ಅವಶ್ಯ'
ಯಾದಗಿರಿ: ಆಧುನಿಕತೆ ಭರಾಟೆಯಲ್ಲಿ ಸಂಪ್ರದಾಯ ಮತ್ತು ಸಂಸ್ಕೃತಿ ಮರೆಯಾಗುತ್ತಿದೆ. ಅದಕ್ಕಾಗಿ ಮಕ್ಕಳಲ್ಲಿ ಧಾರ್ಮಿಕ ವಿಷಯಗಳ ಬಗ್ಗೆ ಸಾಮಾನ್ಯ ಜ್ಞಾನ ಮತ್ತು ತಿಳಿವಳಿಕೆ ನೀಡುವುದು ಅವಶ್ಯ ಎಂದು ಪಂಡಿತ ನರಸಿಂಹಾಚಾರ್ಯ ಪುರಾಣಿಕ ಹೇಳಿದರು. ನಗರದ ಪರಿಮಳ ಮಂಟಪದಲ್ಲಿ ಮಂಗಳವಾರ ಉತ್ತರಾಧಿ ಮಠದ ಸತ್ಯಾತ್ಮ ಶ್ರೀಪಾದಂಗಳರವರ ಅನುಗ್ರಹದಿಂದ ವಿಶ್ವಮಾಧ್ವ ಮಹಾಪರಿಷತ್ ಘಟಕದ ವತಿಯಿಂದ ಹಮ್ಮಿಕೊಂಡ ನಾಲ್ಕು ದಿನಗಳ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೈನಂದಿನ ಶಿಕ್ಷಣದ ಒತ್ತಡದಲ್ಲಿ ಮಕ್ಕಳು ದೇವರನಾಮ, ದೇವರ ಸ್ತೋತ್ರ ಮತ್ತು ಸಂಧ್ಯಾವಂದನೆಗಳನ್ನು ಮಾಡಲು ಸಮಯ ಸಿಗುತ್ತಿಲ್ಲ. ಅಲ್ಲದೆ ಪಾಲಕರು ಸಹ ಗಮನಹರಿಸದೆ ಇರುವುದು ವಿಷಾದನೀಯ ಸಂಗತಿ. ಅದಕ್ಕಾಗಿ ಈ ಶಿಬಿರದಲ್ಲಿ ವಿಪ್ರ ಮಕ್ಕಳಿಗಾಗಿ ಕೆಲವು ಮಾಹಿತಿಗಳನ್ನಾದರೂ ನೀಡುವುದು ಉದ್ದೇಶವಾಗಿದೆ ಎಂದು ಹೇಳಿದರು. ಮಕ್ಕಳು ಪ್ರತಿನಿತ್ಯ ಸಂಧ್ಯಾವಂದನೆ ಮಾಡಬೇಕು. ಅಮವಾಸ್ಯೆ, ಹುಣ್ಣಿಮೆ ಮತ್ತು ತಿಥಿಗಳ ಬಗ್ಗೆಯಾದರೂ ತಿಳಿವಳಿಕೆ ಇರಬೇಕೆಂಬ ಕಾರಣಕ್ಕಾಗಿ ಶಿಬಿರವನ್ನು ನಗರದ ವಿಪ್ರ ಸಮಾಜದ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದೆ. ಮುಂಬರುವ ದಿನಗಲ್ಲಿ ಮಕ್ಕಳಲ್ಲಿ ಧಾರ್ಮಿಕ ತಿಳಿವಳಿಕೆಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು. ಶಿಬಿರದಲ್ಲಿ 40ಕ್ಕೂ ಹೆಚ್ಚು ಮಕ್ಕಳು ಇದ್ದರು.
ಕಲಾ ಘಟಕ ಉದ್ಘಾಟನೆ
ಯಾದಗಿರಿ: ಹಿಂದಿನ ದಿನಗಳಲ್ಲಿ ಕಲೆ, ಸಾಹಿತ್ಯಕ್ಕೆ ರಾಜಾಶ್ರಮದಲ್ಲಿ ಕಲೆ ಬೆಳವಣಿಗೆ ಆಗುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಕಲಾ ಸಂಘಸಂಸ್ಥೆಗಳು, ಕರ್ನಾಟಕ ಲಲಿತಾ ಕಲಾ ಅಕಾಡೆಮಿ, ಕೇಂದ್ರ ಅಕಾಡೆಮಿಗಳು ಕಲೆಯನ್ನು ಪೋಷಿಸುತ್ತಿವೆ ಎಂದು ರಾಷ್ಟ್ರೀಯ ಕಲಾವಿದ ಮಹ್ಮದ್ ತಾಹೇರ್ ನುಡಿದರು. ಸ್ಥಳೀಯ ಆದರ್ಶ ವಿದ್ಯಾಲಯದಲ್ಲಿ ಹಮ್ಮಿಕೊಂಡ ವಿಶ್ವ ದೃಶ್ಯ ಕಲಾ ದಿನಾಚರಣೆ ಹಾಗೂ ದೃಶ್ಯ ಕಲಾ ಪರಿಷತ್ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಗೊಂದಳೆ ಮಾತನಾಡಿ, ಯೂನೆಸ್ಕೋ ಸಂಸ್ಥೆಯೂ ಪ್ರಥಮ ಬಾರಿಗೆ ಖ್ಯಾತ ಕಲಾವಿದ ಡಾ. ಲಿಯೋನಾರ್ಡೋ- ಡಾ- ವಿಂಚಿ ಅವರ ಜನ್ಮ ದಿನಾಚರಣೆ ನಿಮಿತ್ತ ವಿಶ್ವ ದೃಶ್ಯ ಕಲಾ ದಿನಾಚರಣೆಯನ್ನಾಗಿ ಆಚರಿಸಲು ಘೋಷಣೆ ಮಾಡಿದ್ದು ಸ್ವಾಗತದ ವಿಷಯವಾಗಿದೆ. ತಾಲೂಕು ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಸ್. ಗಡ್ಡಿ ಮಾತನಾಡಿ, ಚಿತ್ರಕಲಾ ಸ್ಪರ್ಧೆ ಏರ್ಪಡಿಸುವುದು, ಪ್ರದರ್ಶನ ಮಾಡುವುದು, ಕೃತಿ ರಚನೆಯಲ್ಲಿ ತೊಡಗಿಸಿಕೊಳ್ಳಲು ಕಲಾವಿದರು ಮುಂದಾಗಬೇಕೆಂದರು. ದೃಶ್ಯ ಕಲಾ ಪರಿಷತ್ ಜಿಲ್ಲಾ ಸಂಚಾಲಕ ಎನ್.ವೆಂಕಟೇಶ ಕಡೇಚೂರು ನಿರೂಪಿಸಿ ಮಂಜುನಾಥ ವಾಟಕರ್ ಇದ್ದರು. ಇದೇ ವೇಳೆ ಮಕ್ಕಳ ಕಲಾಕೃತಿ ಪ್ರದರ್ಶನ ಮಾಡಲಾಯಿತು. ನಾಗರಾಜ್ ಸ್ವಾಗತಿಸಿ ವೆಂಕಟೇಶ ವಂದಿಸಿದರು.