4 ಪಾಲಿಕೆ ಸದಸ್ಯರು ಜೆಡಿಎಸ್‌ಗೆ
ಗುಲ್ಬರ್ಗ: ಮಹಾನಗರ ಪಾಲಿಕೆಗೆ ಬಿಜೆಪಿಯಿಂದ ಆಯ್ಕೆಯಾದ ನಾಲ್ವರು ಪಾಲಿಕೆ ಸದಸ್ಯರು ಬುಧವಾರ ಗುಲ್ಬರ್ಗ ದಕ್ಷಿಣ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಶೀಲ್ ನಮೋಶಿ ಅವರ ಸಮ್ಮುಖದಲ್ಲಿ ಜೆಡಿಎಸ್ ಸೇರಿದರು. ಪಾಲಿಕೆ ಸದಸ್ಯರಾದ ನಾಗರಾಜ ಗುಂಡಗುರ್ತಿ, ಗೀತಾ ರಾಜು ವಾಡೇಕರ್, ರಾಜಶ್ರೀ ಜಾಧವ, ಮೀನಾಕ್ಷಿ ಮದನ ಬಂಡೆ, ಜಿಪಂ ಮಾಜಿ ಅಧ್ಯಕ್ಷೆ ಶೋಭಾ ದಿಗಂಬರ ಬೆಳಮಗಿ ಜೆಡಿಎಸ್ ಸೇರಿದ್ದು, ಇನ್ನಿಬ್ಬರು ಪಾಲಿಕೆ ಸದಸ್ಯರು ಸದ್ಯದಲ್ಲಿಯೇ ಜೆಡಿಎಸ್ ಸೇರಲಿದ್ದಾರೆ ಎಂದು ತಿಳಿಸಿದ್ದಾರೆ.
ಬಾಬುಮಿಯ್ಯಾ ಮರಳಿ ಕಾಂಗ್ರೆಸ್‌ಗೆ
ಚಿತ್ತಾಪುರ: ತಾಪಂ ಮಾಜಿ ಉಪಾಧ್ಯಕ್ಷ ಬಾಬುಮಿಯ್ಯ ಕಲಗುರ್ತಿ, ಕೋಲಿ ಸಮಾಜದ ಮುಖಂಡ ಕಾಮಣ್ಣ ವಚ್ಚಾ, ಶ್ರೀಮಂತ ನಾಮದಾರ ಬಿಜೆಪಿ ತೊರೆದು ಮರಳಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಚಿತ್ತಾಪುರದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ನಾಯಕತ್ವದಲ್ಲಿ ವಿಶ್ವಾಸವಿಟ್ಟು, ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳರ ನೇತೃತ್ವದಲ್ಲಿ ಪ್ರಿಯಾಂಕ ಖರ್ಗೆ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವುದಾಗಿ ಅವರು ಹೇಳಿದ್ದಾರೆ. ಬಾಬುಮಿಯ್ಯಾ ಕಲಗುರ್ತಿ ಅವರು ಮೊದಲು ಕಾಂಗ್ರೆಸ್ ಕಾರ್ಯಕರ್ತರಾಗಿ ಕೆಲಸ ನಿರ್ವಹಿಸಿ ನಂತರ ಜೆಡಿಎಸ್ ಸೇರ್ಪಡೆಯಾಗಿ ಜೆಡಿಎಸ್ ತಾಲೂಕು ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು. ಕ್ಷೇತ್ರ ವಿಂಗಡಣೆಯಿಂದಾಗಿ ಮೀಸಲು ಕ್ಷೇತ್ರವಾದಾಗ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈಗ ಬಿಜೆಪಿಯಿಂದ ಬೇಸತ್ತು ಕಾಂಗ್ರೆಸ್‌ಗೆ ಸೇರಿರುವುದಾಗಿ ಅವರು ಹೇಳಿದರು.
ಮಾಲಗತ್ತಿ: ಬಿಜೆಪಿ ಸೇರ್ಪಡೆ
ಚಿತ್ತಾಪುರ: ತಾಲೂಕಿನ ಮಾಲಗತ್ತಿ ಗ್ರಾಮದ ಅನೇಕರು ಕಾಂಗ್ರೆಸ್, ಜೆಡಿಎಸ್ ತೊರೆದು ಶರಣಪ್ಪ ಸಣಬೋ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಸುಭಾಷ ಮಡಿವಾಳ, ಮಲಗೊಂಡಪ ಪೂಜಾರಿ, ಮಲ್ಲಪ್ಪ ಮರಿಲಿಂಗಪ್ಪ, ಸಿದ್ರಾಮಪ್ಪ ಸಾಲೋಳ್ಳಿ, ಈರಪ್ಪ ನರಬೋಳಿ, ಸಂಗಪ್ಪ ಚಿಂಚೋಳ್ಳಿ, ಮರಿಲಿಂಗ ವಾಲಿಕಾರ, ರಾಜು, ಭೀಮು ಸೊನ್ನ ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರಿಕೊಂಡರು. ಪಕ್ಷದ ಕಚೇರಿಯಲ್ಲಿ ಶಾಸಕ ವಾಲ್ಮೀಕಿ ನಾಯಕ ಅವರಿಗೆ ಹೂಮಾಲೆ ಹಾಕಿ ಪಕ್ಷಕ್ಕೆ ಸ್ವಾಗತಿಸಿಕೊಂಡರು. ಶರಣು ಜ್ಯೋತಿ ಹಾಗೂ ಪಕ್ಷದ ಮುಖಂಡರು ಇದ್ದರು.
ಪ್ರಾಮಾಣಿಕತೆಗೆ ಬೆಲೆ ಕೊಡಿ: ಪಾಟೀಲ್
ಜೇವರ್ಗಿ: ನನ್ನ ಜೀವನದುದ್ದಕ್ಕೂ ನಿಷ್ಠೆ, ಪ್ರಾಮಾಣಿಕತೆ ಮೈಗೂಡಿಸಿಕೊಂಡು ಸಮಾಜ ಸೇವೆ ಮಾಡಿದ್ದೇನೆ. ಬೇರೆಯವರಂತೆ ಬೆನ್ನಿಗೆ ಚೂರಿ ಹಾಕುವ ಜಾಯಮಾನ ನನ್ನದಲ್ಲ ಎಂದು ಕೆಜೆಪಿ ಅಭ್ಯರ್ಥಿ ಮಲ್ಲಿನಾಥಗೌಡ ಪಾಟೀಲ್ ಯಲಗೋಡ ಹೇಳಿದರು. ಪಟ್ಟಣದ ನರೇಂದ್ರ ಶಿಕ್ಷಣ ಸಂಸ್ಥೆಯ ಬಳಿಯ ಆವರಣದಲ್ಲಿ ನಡೆದ ಕೆಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ಕುಸ್ತಿ, ಅಮೃತರಾಯಗೌಡ ಗುಡೂರ, ರೇವಣಸಿದ್ದಪ್ಪ ಸೇರಿದಂತೆ ಅನೇಕರು ಕೆಜೆಪಿ ಸೇರ್ಪಡೆಗೊಂಡರು. ಸಭೆಯ ನಂತರ ಮೆರವಣಿಗೆ ಮೂಲಕ ತೆರಳಿ ಕೆಜೆಪಿ ಅಭ್ಯರ್ಥಿಯಾಗಿ ಮಲ್ಲಿನಾಥಗೌಡ ಪಾಟೀಲ್ ನಾಮಪತ್ರ ಸಲ್ಲಿಸಿದರು.