ಸುರಪುರ ಕೆಜೆಪಿ ಅಭ್ಯರ್ಥಿ ನಾಮಪತ್ರ ತಿರಸ್ಕರಿಸಲು ಆಗ್ರಹ
ಯಾದಗಿರಿ: ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಿವರಾಜ ಮಲ್ಲೇಶಿ ಚುನಾವಣೆ ಅಧಿಕಾರಿಗಳಿಗೆ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಕಾರಣ ಅವರ ನಾಮಪತ್ರವನ್ನು ತಿರಸ್ಕರಿಸಬೇಕೆಂದು ಆಗ್ರಹಿಸಿ ನಗರದ ಏಕಲವ್ಯ ಯುವಕ ಸಂಘದ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು.
ಅಭ್ಯರ್ಥಿ ಮಲ್ಲೇಶಿ ಬೀದರ್ ಜಿಲ್ಲೆಯವರಾಗಿದ್ದು, ಕುರುಬ ಸಮಾಜಕ್ಕೆ ಸೇರಿದವರಾಗಿದ್ದರೆ. ಅವರು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಗೊಂಡ ಮತ್ತು ರಾಜ ಗೊಂಡ ಜನಾಂಗಕ್ಕೆ ಸೇರಿದವರೆಂದು ಸುಳ್ಳು ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ಪಡೆದು, ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಸುರಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ ಎಂದು ಆರೋಪಿಸಿದರು.
ಆದ್ದರಿಂದ ಚುನಾವಣಾ ಅಧಿಕಾರಿಗಳು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಅವರ ಮೂಲ ಜಾತಿ ಹಾಗೂ ಶೈಕ್ಷಣಿಕ ದಾಖಲೆಗಳನ್ನು ಪರಿಶೀಲಿಸಬೇಕೆಂದು ಒತ್ತಾಯಿಸಿದರು.
ಮಲ್ಲಣ್ಣ ಆನೂರ್, ಸಂಘದ ಅಧ್ಯಕ್ಷ ಚಂದ್ರಶೇಖರ ಪರಸ ನಾಯಕ, ಸಿದ್ದಪ್ಪ ಅಕ್ಕನೋರ, ಸಮಾಜದ ಮುಖಂಡ ಟಿ.ಎನ್. ಭೀಮುನಾಯಕ, ಮಲ್ಲಪ್ಪ ಕಮನೂರ್, ದೇವು ಸಿಂದಗಿ, ರಾಹುಲ್ ನಾಯಕ್, ಬಸವರಾಜ, ಸಿದ್ದು ನಾಯಕ ಹತ್ತಿಕುಣಿ, ನಾಗು ಕಟ್ಟಿಮನಿ, ನಾಗರಾಜ ಜಮಾರ್, ಸಾಬಣ್ಣ ಇದ್ದರು.