ಹೊಸದಾಗಿ 24 ಸಾವಿರ ಮತದಾರರ ಸೇರ್ಪಡೆ
ಕನ್ನಡಪ್ರಭ ವಾರ್ತೆ, ಯಾದಗಿರಿ, ಏ.17
ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಹೊಸದಾಗಿ 24,432 ಮತದಾರರು ಸೇರ್ಪಡೆಗೊಂಡಿದ್ದಾರೆ. ಈ ಪೈಕಿ 778 ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ಜಿಲ್ಲಾಧಿಕಾರಿ ಪಿ.ರಾಜೇಂದ್ರ ಚೋಳನ್ ಹೇಳಿದರು.
ತಮ್ಮ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮತದಾರರ ಪಟ್ಟಿಯಲ್ಲಿ ಹೆಸರುಗಳು ತಿರಸ್ಕೃತಗೊಳ್ಳಲು ಸೂಕ್ತ ದಾಖಲಾತಿಗಳು ಇಲ್ಲದಿರುವುದು ಕಾರಣ. ಜಿಲ್ಲೆಯ ಒಟ್ಟು ಮತದಾರರು, ಪುರುಷ ಹಾಗೂ ಮಹಿಳಾ ಮತದಾರರ ಸಂಖ್ಯೆ ಎಷ್ಟಿದೆ ಎನ್ನುವುದು ಶೀಘ್ರ ಗೊತ್ತಾಗಲಿದೆ. ಮುಕ್ತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಈಗಾಗಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯ ಎಲ್ಲ ಕ್ಷೇತ್ರಗಳಿಗೆ ಚುನಾವಣಾ ವೀಕ್ಷಕರಾಗಿ ಹಿರಿಯ ಅಧಿಕಾರಿಗಳು ಆಗಮಿಸಿದ್ದಾರೆ ಎಂದು ಅವರು ತಿಳಿಸಿದರು.
ಚುನಾವಣಾ ವೀಕ್ಷಕರ ನೇಮಕ: ಸುರಪುರ ಕ್ಷೇತ್ರಕ್ಕೆ ಚುನಾವಣೆ ವೀಕ್ಷಕರಾಗಿ ಐಎಫ್ಎಸ್ ಅಧಿಕಾರಿ ಅವಸಾಕ್, ಶಹಾಪುರಕ್ಕೆ ಐಎಎಸ್ ಅಧಿಕಾರಿ ಸುಧೀರಕುಮಾರ ದೀಕ್ಷಿತ್, ಯಾದಗಿರಿಗೆ ಕೆ.ಪಿ. ಗುಪ್ತ ಹಾಗೂ ಗುರುಮಠಕಲ್ಗೆ ನರ್ಮದೇಶ್ವರ ಲಾಲ್ ಅವರು ಆಗಮಿಸಿದ್ದಾರೆ. ಜತೆಗೆ ಯಾದಗಿರಿ, ಗುರುಮಠಕಲ್, ಶಹಾಪುರ ಮತ್ತು ಸುರಪುರ ವಿಧಾನಸಭೆ ಕ್ಷೇತ್ರಕ್ಕೆ ಈಗಾಗಲೇ ಚುನಾವಣೆ ವೆಚ್ಚ ವೀಕ್ಷರನ್ನಾಗಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಎಲ್ಲರೂ ಚುನಾವಣೆ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ ಎಂದರು.
3 ಪ್ರಕರಣ ದಾಖಲು: ಈಗಾಗಲೇ ಚುನಾವಣೆಯಲ್ಲಿ ಅಕ್ರಮವಾಗಿ ಹಣ ಸಾಗಿಸಿದ್ದ ಒಟ್ಟು ಮೂರು ಪ್ರಕರಣಗಳು ಪತ್ತೆಯಾಗಿವೆ. ಒಮ್ಮೆ 15 ಲಕ್ಷ, ಮತ್ತೊಮ್ಮೆ 7.5 ಲಕ್ಷ ಹಾಗೂ ಇನ್ನೊಮ್ಮೆ 1.5 ಲಕ್ಷ ವಶಪಡಿಸಿಕೊಳ್ಳಲಾಗಿದೆ. 600 ಲೀಟರ್ ಮದ್ಯ ಮತ್ತು 52 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಸಂಚಾರ ನಿಯಮ ಉಲ್ಲಂಘಿಸಿದವರ ಬಗ್ಗೆ ಈಗಾಗಲೇ ವಿಡಿಯೋ ಚಿತ್ರಣ ಮಾಡಲಾಗಿದೆ. ಇದನ್ನು ಗಮನಿಸಿ ಪ್ರಕರಣ ದಾಖಲಿಸಲಾಗುವುದು ಎಂದರು.
ಅಭ್ಯರ್ಥಿಗಳಿಂದ ಏನಾದರೂ ಸಂಚಾರ ಉಲ್ಲಂಘನೆ ಮಾಡಿರುವುದು ಕಂಡುಬಂದರೆ ಅವರ ಮೇಲೂ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾಗುವುದು. ಅಕ್ರಮವಾಗಿ ಹಣ ಮತ್ತು ಮದ್ಯ ಸಾಗಣೆ ತಡೆಯಲು ಈಗಾಗಲೇ ಚೆಕ್ಪೋಸ್ಟ್ಗಳನ್ನು ನಿರ್ಮಿಸಲಾಗಿದೆ. ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೂಡ ಅಲ್ಲಿ ಕಲ್ಪಿಸಲಾಗಿದೆ. ಶಾಂತಿಯುತವಾಗಿ ಚುನಾವಣೆ ನಡೆಸಲು ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.