21ರಂದು ಶಹಾಬಾದ್ಗೆ ಸಿಎಂ
ಗುಲ್ಬರ್ಗ/ಶಹಾಬಾದ್: ಗುಲ್ಬರ್ಗ ಗ್ರಾಮೀಣ ಮತಕ್ಷೇತ್ರದ ಅಭ್ಯರ್ಥಿ ಸಚಿವ ರೇವುನಾಯಕ ಬೆಳಮಗಿ ಪರ ಚುನಾವಣಾ ಪ್ರಚಾರಕ್ಕೆ ಮುಖ್ಯಮಂತ್ರಿ ಶೆಟ್ಟರ್ ಏ.21 ರಂದು ಶಹಾಬಾದ್ಗೆ ಆಗಮಿಸಲಿದ್ದಾರೆ ಎಂದು ಬಿಜೆಪಿ ನಗರ ಕಾರ್ಯದರ್ಶಿ ನವನಾಥ ಕುಸಾಳೆ ತಿಳಿಸಿದ್ದಾರೆ. ಅಂದು ಮಧ್ಯಾಹ್ನ 3.30ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಅಲ್ಸಟಾಮ್ ಹೆಲಿಪ್ಯಾಡ್ಗೆ ಆಗಮಿಸಿಸಲಿದ್ದು, ಲಕ್ಷ್ಮೀ ಗಂಜನಲ್ಲಿ ಪಕ್ಷದ ಪರ ಸಾರ್ವಜನಿಕ ಪ್ರಚಾರ ಸಭೆ ನಡೆಸುವರು ಎಂದು ತಿಳಿಸಿದ್ದಾರೆ.
ಮತಜಾಗೃತಿ; ಬೀದಿ ನಾಟಕ
ಗುಲ್ಬರ್ಗ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಮೇ 5ರಂದು ನಡೆಯುವ ಚುನಾವಣೆಯಲ್ಲಿ ಮತದಾನ ಪ್ರಮಾಣ ಗರಿಷ್ಠ ಮಟ್ಟದಲ್ಲಿ ಹೆಚ್ಚಿಸಲು ಹಾಗೂ ಮತದಾರರಲ್ಲಿ ಮತದಾನ ಹಕ್ಕಿನ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿಯಿಂದ ಜಿಲ್ಲೆಯ ಆಯ್ದ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಏ.17ರಿಂದ ಆರಂಭವಾದ ಬೀದಿ ನಾಟಕ ಕಾರ್ಯಕ್ರಮ ಮೇ 1ರವರೆಗೆ ನಡೆಯಲಿದೆ. ಇದಕ್ಕಾಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಹಿಂದೆ ಜರುಗಿದ ಚುನಾವಣೆಯಲ್ಲಿ ಶೇ.40ಕ್ಕಿಂತಲೂ ಕಡಿಮೆ ಪ್ರತಿಶತ ಮತದಾನವಾದ ಹಾಗೂ ಉದ್ಯೋಗ ಅರಸಿ ವಲಸೆ ಹೋಗುವ ಪ್ರದೇಶಗಳನ್ನು ಗುರುತಿಸಿ ಬೀದಿ ನಾಟಕ ಪ್ರದರ್ಶನಕ್ಕಾಗಿ ಮಾರ್ಗದ ನಕಾಶೆ ತಯಾರಿಸಲಾಗಿದೆ. ಕಡ್ಡಾಯ ಮತದಾನ ಮಾಡುವಂತೆ ಜಾಗೃತಿ ಮೂಡಿಸಲು ಪ್ರಭುಲಿಂಗ ಕಿಣಗಿ, ಶಾಂತಯ್ಯ ಮಠಪತಿ ಮತ್ತು ರೇಣುಕಾ ನೇತೃತ್ವದ ತಂಡಗಳು ಜಿಲ್ಲೆಯ 135 ಗ್ರಾಮಗಳಲ್ಲಿ ಪ್ರಚಾರ ಗೀತೆ, ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸಲಿವೆ. ಈ ತಂಡಗಳು ಪ್ರತಿದಿನ ಮೂರು ಗ್ರಾಮ/ನಗರ ಪ್ರದೇಶಗಳಲ್ಲಿ ಬೆಳಗ್ಗೆ 9 ಗಂಟೆಗೆ, ಮಧ್ಯಾಹ್ನ 3 ಗಂಟೆಗೆ ಹಾಗೂ ಸಂಜೆ 6 ಗಂಟೆಗೆ ಕಾರ್ಯಕ್ರಮ ನೀಡಲಿವೆ.
ಹೋರಾಟಕ್ಕೆ ಶಕ್ತಿ ತುಂಬಿ: ಹಿರೇಮಠ
ಜೇವರ್ಗಿ: ತಾವು ಕಳೆದ ಎರಡುವರೇ ದಶಕಗಳಿಂದ ದೀನ, ದಲಿತ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಸೇರಿದಂತೆ ರೈತಪರ ಜನಪರ ಹೋರಾಟಗಳನ್ನು ಮಾಡಿದ್ದೇನೆ. ತಮ್ಮ ಹೋರಾಟಕ್ಕೆ ಶಕ್ತಿ ತುಂಬಿದ್ದೆಯಾದರೇ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ಪಡಿಸುವ ಸಂಕಲ್ಪ ತಮ್ಮದಾಗಿದೆ ಎಂದು ಜೆಡಿಎಸ್ ಅಭ್ಯರ್ಥಿ ಕೇದಾರಲಿಂಗಯ್ಯ ಹಿರೇಮಠ ಅಭಿಪ್ರಾಯಪಟ್ಟರು.
ನಾಮಪತ್ರ ಸಲ್ಲಿಸಿದ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತ, ತಾವು ಯಾವುದೇ ಅಧಿಕಾರದ ಆಸೆ ಇಲ್ಲದೆ ಕಳೆದ ಎರಡೂವರೆ ದಶಕಗಳಿಂದ ಜನಪರ, ರೈತಪರ ಹೋರಾಟ ಮಾಡುವ ಮೂಲಕ ತಾಲೂಕಿನಲ್ಲಿ ಮಹತ್ತರವಾದ ಮಲ್ಲಾಬಾದ ಏತ ನೀರಾವರಿ ಸೇರಿದಂತೆ ಅನೇಕ ಯೋಜನೆಗಳನ್ನು ಸಕಾರಗೊಳ್ಳುವಲ್ಲಿ ತಮ್ಮ ಜೀವನವನ್ನೇ ಮುಡುಪಾಗಿಸಿದ್ದೇನೆ. ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಶಿವಾನಂದ ದ್ಯಾಮಗೊಂಡ, ಶಂಕರ ಕಟ್ಟಿಸಂಗಾವಿ, ಎಸ್.ಎಸ್. ಸಲಗರ, ಸೈಯದ್ ಪಟೇಲ್ ಸೈದಾಪುರ, ಎ.ಬಿ. ಹಿರೇಮಠ, ಎಸ್.ಕೆ. ಹೇರೂರ, ಸದಾನಂದ ಪಾಟೀಲ್, ಭೀಮರಾಯ ಜನಿವಾರ, ಭೀಮಾಶಂಕರ ವಕೀಲ, ಚಂದ್ರಶೇಖರ ಮಲ್ಲಾಬಾದ, ಪ್ರಕಾಶ ಪಾಟೀಲ್ ಯತ್ನಾಳ, ಸಿದ್ದು ಮಾವನೂರ, ರುದ್ರಗೌಡ ಹವಳಗಾ ಇದ್ದರು.