ಚಿಂಚೋಳಿ; ಬಿಜೆಪಿ ತೊರೆದು ಕೆಜೆಪಿ ಸೇರ್ಪಡೆ
ಚಿಂಚೋಳಿ: ತಾಪಂ ಬಿಜೆಪಿ ಸದಸ್ಯರು ಕೆಜೆಪಿ ಅಭ್ಯರ್ಥಿ ಸುನೀಲ್ ವಲ್ಯಾಪುರೆ ಅವರಿಗೆ ಚುನಾವಣೆಯಲ್ಲಿ ಬೆಂಬಲ ವ್ಯಕ್ತಪಡಿಸಲು ಬಿಜೆಪಿ ತೊರೆದು ಕೆಜೆಪಿಗೆ ಬುಧವಾರ ಸೇರ್ಪಡೆಗೊಂಡರು.
ಪಟ್ಟಣದ ಚಂದಾಪುರ ನಗರದ ಕೆಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಲ್ಯಾಪುರೆ, ತಾಪಂ ಬಿಜೆಪಿ ಸದಸ್ಯರಾದ ಗುಂಡಪ್ಪ ಮಾಳಗಿ ಕೋಡ್ಲಿ, ರಾಮರಾವ ಪಾಟೀಲ್ ಮೋಘಾ, ಅನುಸೂಯಾ ಭವಾನಿಸಿಂಗ್ ಪಸ್ತಪುರ, ಸುನೀತಾ ಪಡಶೆಟ್ಟಿ ಐನಾಪುರ, ಉಷಾ ಮಂಜುನಾಥ ಕಾಬಾ ಚಂದನಕೇರಾ, ಕಮಲಮ್ಮ ಈರಣ್ಣ ಮಿರಿಯಾಣ ಮುಂತಾದವರು ಕೆಜೆಪಿಗೆ ಸೇರಿದ್ದಾರೆ ಎಂದರು.
ಕಳೆದ 5 ವರ್ಷಗಳಲ್ಲಿ ತಾಲೂಕಿನ ಅಭಿವೃದ್ಧಿಗಾಗಿ ಸಾಕಷ್ಟು ಪ್ರಯತ್ನಿಸಿದ್ದೇನೆ. ಹೀಗಾಗಿ ಈ ಚುನಾವಣೆಯಲ್ಲಿಯೂ ಸಹ ತಮ್ಮ ಗೆಲವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚಿಂಚೋಳಿ ಪಟ್ಟಣಕ್ಕೆ ಏ.21ರಂದು ಆಗಮಿಸಿ ಬಹಿರಂಗ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ ಎಂದರು. ಕೋಡ್ಲಿ, ಗೋಟೂರ, ಹಸರಗುಂಡಗಿ ಗ್ರಾಮಗಳ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ತಮ್ಮ ಪಕ್ಷ ತೊರೆದು ಕೆಜೆಪಿಗೆ ಸೇರ್ಪಡೆಗೊಂಡರು. ಶಶಿಧರ ಸೂಗರ, ಭೀಮಶೆಟ್ಟಿ ಮುರುಡಾ, ಸಂಜೀವ ಪುಣ್ಯಶೆಟ್ಟಿ ಇತರರು ಇದ್ದರು.
-
10.50 ಲಕ್ಷ ಮೌಲ್ಯದ ನಕಲಿ ಮದ್ಯ ಜಪ್ತಿ, ಒಬ್ಬನ ಬಂಧನ
ಗುಲ್ಬರ್ಗ: ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 10.50 ಲಕ್ಷ ಮೌಲ್ಯದ 550 ಬಾಕ್ಸ್ ಲೇಬಲ್ ಇಲ್ಲದ ನಕಲಿ ಮದ್ಯ, 8 ಲಕ್ಷ ಮೌಲ್ಯದ ಲಾರಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಆಳಂದ ತಾಲೂಕಿನ ನಿರಗುಡಿ ರಸ್ತೆಯಲ್ಲಿ ಗುರುವಾರ ಬೆಳಗ್ಗೆ ಜಪ್ತಿ ಮಾಡಿ ಚಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರದಿಂದ ಆಳಂದ ಕಡೆಗೆ ಲಾರಿಯಲ್ಲಿ ನಕಲಿ ಮದ್ಯವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಅಬಕಾರಿ ಜಂಟಿ ಆಯುಕ್ತ ಬಸವರಾಜ ಅವರ ನೇತೃತ್ವದಲ್ಲಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಒಟ್ಟು 18.50 ಲಕ್ಷ ಮೌಲ್ಯದ ಲಾರಿ ಸೇರಿದಂತೆ ನಕಲಿ ಮದ್ಯ ಜಪ್ತಿ ಮಾಡಿದ್ದಾರೆ ಎಂದು ರಾಜ್ಯ ವಿಕ್ಷಣ ದಳದ ಅಬಕಾರಿ ಅಧೀಕ್ಷಕ ಶಿವನಗೌಡ ನಾಯಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಲಾರಿ ಚಾಲಕ ಖಾದರ್ ಖಾನ್ ಎಂಬಾತನನ್ನು ಬಂಧಿಸಿ ನ್ಯಾಯಾಂಗ ವಶಕ್ಕೊಪ್ಪಿಸಲಾಗಿದೆ ಎಂದು ತಿಳಿಸಿದರು. ಅಬಕಾರಿ ಜಂಟಿ ಆಯುಕ್ತರ ಕಚೇರಿಯ ಅಬಕಾರಿ ಅಧೀಕ್ಷಕ ಬಸವರಾಜ ನೇತೃತ್ವದಲ್ಲಿ ದಿನಕರ್, ಕಮಲಾಕರ್, ಎ.ಎ. ಮುಜಾವರ ಮತ್ತು ಚುನಾವಣೆ ತಂಡದ ಅಬಕಾರಿ ನಿರೀಕ್ಷಕ ಸತೀಶ ಕಾಗಲಿ ಹಾಗೂ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.